ಈ ಪುಟವನ್ನು ಪರಿಶೀಲಿಸಲಾಗಿದೆ

೨೭೬

ಕ್ರಾಂತಿ ಕಲ್ಯಾಣ

ಮೊದಲು ಉತ್ತರ ಕೊಡಬೇಕಾಗುವುದು.” - ಬಿಜ್ಜಳನು ಯೋಚಿಸಿ ಹೇಳಿದನು. ಐನೂರ್ವರ ಮಹಾಸಂಘದಂತಹ ಐತಿಹಾಸಿಕ ಪ್ರಭಾವಶಾಲಿ ಸಂಸ್ಥೆಯ ಅಧ್ಯಕ್ಷರೊಡನೆ ರೂಢಾಚರಣೆ, ಜ್ವಾಲಾಮುಖಿಯೊಡನೆ ಸರಸವಾಡಿದಂತೆ ಎಂಬುದು ಅವನಿಗೆ ತಿಳಿದಿತ್ತು. ಅರಮನೆಯ ರಕ್ಷಕಭಟರು ತನ್ನ ಆಜ್ಞೆಗಳನ್ನು ಉಲ್ಲಂಘಿಸಿ ದೂರ ಸರಿದು ನಿಂತಿದ್ದನ್ನು ಕಂಡು ಅವನು ಅಚ್ಚರಿಗೊಂಡಿದ್ದನು. ತನ್ನ ಅಭ್ಯರ್ಥಿ ಪತ್ರದ ಬಗೆಗೆ ಮಹಾಸಂಘದ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುವ ಕುತೂಹಲ ಎಚ್ಚೆತ್ತಿತ್ತು.

“ನಿಮ್ಮ ಪ್ರಶ್ನೆಯೇನು? ಸಂಕೋಚವಿಲ್ಲದೆ ಕೇಳಬಹುದು.” -ಸನ್ಯಾಸಿ ಕೂಡಲೆ ಉತ್ತರ ಕೊಟ್ಟನು.

“ನಾನು ಕಳುಹಿಸಿದ ಮೊದಲೆರಡು ಅಭ್ಯರ್ಥಿ ಪತ್ರಗಳನ್ನು ಮಹಾಸಂಘ ನಿರಾಕರಿಸಿದ ಕಾರಣವೇನು?”

“ಅಂಗೀಕಾರ ನಿರಾಕರಣೆಗೆ ಕಾರಣ ಕೊಡುವುದು ಮಹಾಸಂಘದ ಸಂಪ್ರದಾಯವಲ್ಲ. ಆದರೂ ವಿಶೇಷ ಸಂದರ್ಭವೆಂದು ಪರಿಗಣಿಸಿ ನಿಮಗೆ ಉತ್ತರ ಕೊಡುತ್ತೇನೆ. ನಿರಾಕರಣೆಗೆ ನೀವು ತಿಳಿದಿರುವ ಕಾರಣವೇನು?” ಪ್ರಶ್ನೆಗೆ ಮರುಪ್ರಶ್ನೆ. ಬಿಜ್ಜಳನು ಅಪೇಕ್ಷಿಸಿದ್ದುದೂ ಆ ಅವಕಾಶವನ್ನೇ.

“ಮಹಾಸಂಘದ ವಾರ್ಷಿಕ ಸಭೆಗಳಲ್ಲಿ ತನ್ನ ಅಭ್ಯರ್ಥಿ ಪತ್ರ ಚರ್ಚೆಗೆ ಬಂದಾಗ ದೇವಗಿರಿ, ಸಿಂಧವಾಡಿ, ಗೋವೆ ಮತ್ತು ಹೊಯ್ಸಳನಾಡಿನ ಪ್ರತಿನಿಧಿಗಳು ತೀವ್ರವಾಗಿ ವಿರೋಧಿಸಿದರೆಂದು ಕೇಳಿದ್ದೇನೆ. ಈ ಪ್ರದೇಶಗಳ ಸಾಮಂತರು, ಮಾಂಡಲಿಕರು, ಮೊದಲಿಂದ ವಿನಾಕಾರಣ ನನ್ನ ಮೇಲೆ ಮತ್ಸರ ಸಾಧಿಸುತ್ತಿದ್ದಾರೆ. ಮಹಾಸಂಘದಿಂದ ನನ್ನನ್ನು ದೂರವಾಗಿಡುವುದು ಅವರ ಅಪೇಕ್ಷೆ.” -ಎಂದು ಅವನು ಉತ್ತರಿಸಿದನು.

ಸನ್ಯಾಸಿ ಹೇಳಿದನು : “ನಿಮಗೆ ಬಹುಮತ ದೊರಕಿತು. ಆದರೂ ಅನಂತರ ನಡೆದ ಪ್ರಕಟ ಅಧಿವೇಶನದಲ್ಲಿ ನೀವು ನಿರೀಶ್ವರವಾದಿ ನಾಸ್ತಿಕರೆಂಬ ಕಾರಣದಿಂದ ಪತ್ರ ನಿರಾಕರಿಸಲ್ಪಟ್ಟಿತು.”

ಬಿಜ್ಜಳನು ಆ ದಿನ ಎರಡನೆಯ ಸಾರಿ ವಿಚಲಿತನಾದನು. ಚಾಲುಕ್ಯ ರಾಜ್ಯದ ಸರ್ವಾಧಿಕಾರಿ, ಮಹಾಮಂಡಲೇಶ್ವರನಾದ ನನ್ನ ಮೇಲೆ ನಾಸ್ತಿಕವಾದದ ಆರೋಪವೆ? ಐನೂರ್ವರ ಮಹಾಸಂಘ ಎಂತಹ ಪ್ರಭಾವಶಾಲಿ ಸಂಸ್ಥೆಯೇ ಆಗಿರಲಿ, ತನ್ನ ಅಧಿಕಾರವ್ಯಾಪ್ತಿ ಉಪಯುಕ್ತತೆಗಳನ್ನು ಅತಿಕ್ರಮಿಸುತ್ತಿದೆಯೆಂದು ಅವನು ಭಾವಿಸಿದನು. ರಾಜ್ಯಾಪಹಾರಕ ನಿರಂಕುಶ ಸರ್ವಾಧಿಕಾರಿಗೆ ಸಹಜವಾದ ಉದ್ದಟತನದಿಂದ