ಈ ಪುಟವನ್ನು ಪರಿಶೀಲಿಸಲಾಗಿದೆ



೨೭೮

ಕ್ರಾಂತಿ ಕಲ್ಯಾಣ

ಮಹಾಸಂಘ ಒಪ್ಪುವುದೆ?” -ಬಿಜ್ಜಳನು ಅಚ್ಚರಿಯಿಂದ ಪ್ರಶ್ನಿಸಿದನು.

ಸನ್ಯಾಸಿ ಹೇಳಿದನು : “ವರ್ಣ ವಿಭಾಗ ಗುಣಕರ್ಮಗಳನ್ನು ಅವಲಂಬಿಸಿದೆ, ಜಾತಿಯನ್ನಲ್ಲ. ಈ ಆರ್ಯಸತ್ಯವನ್ನು ಮರೆಯುವ ಸಮಾಜ, ಪತನದ ದಾರಿ ಹಿಡಿದಂತೆಯೆ. ತನ್ನ ಭಕ್ತಿ ನಿಷ್ಠೆ ಸದ್ವರ್ತನೆಗಳಿಂದ ಹರಳಯ್ಯ ಶ್ರೇಷ್ಠ ಕಲಾವಿದ. ಅಜಂತದ ಚೀರಘಟ್ಟ ಕಲಾ ಸಂಪ್ರದಾಯ ಅವನಲ್ಲಿ ಜೀವಂತವಾಗಿದೆ.

“ದುಶ್ಶೀಲಃ ಶಿಲಯುಕ್ತೋ ವಾ ಯಾ ವಾ ಕೋಷ್ಯಸ್ಯ ಲಕ್ಷಣಂ
ಪ್ರತಿಭಾಭೂತಿ ಸಂಯುಕ್ತೋ ಸ ಪೂಜ್ಯೋ ರಾಜಪುತ್ರವತ್ ||
“ಲೆಂಕನಾಗಲಿ, ಕಿಂಕರನಾಗಲಿ, ಶರಣನಾಗಲಿ ಸಂದೇಹಿಯಾಗಲಿ, ದರ್ಶನ ಸ್ಪರ್ಶನವುಳ್ಳವರಾಗಲಿ ಪ್ರತಿಭಾಶಾಲಿಯಾದ ಕಲಾಕಾರನನ್ನು ರಾಜಪುತ್ರನಂತೆ ಗೌರವಿಸಬೇಕು ಎಂದು ಶೈವಾಗಮಗಳು ಹೇಳುತ್ತವೆ. ತಿಳಿದೋ ತಿಳಿಯದೆಯೋ, ಪ್ರಕಟವಾಗಿರೋ ರಹಸ್ಯವಾಗಿಯೋ ನಮ್ಮ ಸಮಾಜದಲ್ಲಿ ನಡೆಯುವ ಅಸವರ್ಣ ವಿವಾಹಗಳಲ್ಲಿ ಶೀಲವಂತ ಲಾವಣ್ಯವತಿಯರ ಮದುವೆಯೂ ಒಂದು. ಅದರಿಂದ ವರ್ಣಸಂಕರವಾಯಿತೆಂದು ಬೊಬ್ಬಿಟ್ಟು ಗೊಂದಲವೆಬ್ಬಿಸುವುದು ಅವಿವೇಕದ ಹಾದಿ. ರಾಜಪುರೋಹಿತ ನಾರಣಕ್ರಮಿತರು ವೈಯಕ್ತಿಕ ಕಾರಣಗಳಿಂದ ಈ ಅಲ್ಪ ವಿಚಾರವನ್ನು ಬೆಟ್ಟವಾಗಿ ಮಾಡಿ ಚಾಲುಕ್ಯ ಧರ್ಮಾಧಿಕರಣವನ್ನು ಅಪಹಾಸ್ಯಕ್ಕೀಡುಮಾಡಿದ್ದಾರೆ. ಆಪಾದಿತರ ವಿಚಾರಣೆ ನಡೆಸದೆ ನೀವು ವಿಧಿಸಿರುವ ದಂಡಾಜ್ಞೆ ಎಲ್ಲ ಧರ್ಮ, ಎಲ್ಲ ಸತ್ಯ, ಎಲ್ಲ ಕಾಲ, ಎಲ್ಲ ದೇಶಗಳಿಗೆ ವಿರುದ್ಧವಾದದ್ದು. ನೀವು ಈಗಲೇ ಎಚ್ಚೆತ್ತುಕೊಳ್ಳದೆ ಹೋದರೆ ನಿರ್ಮೂಲವಾಗಿ ನಾಶವಾಗುವಿರಿ. ನಿಮ್ಮೊಡನೆ ಚಾಲುಕ್ಯ ರಾಜ್ಯವೂ ನಾಶವಾಗುವುದು.”

ನುಡಿಯುತ್ತಿದ್ದಂತೆ ಸನ್ಯಾಸಿಯ ಕಂಠ ಹೆಚ್ಚು ಗಂಭೀರವಾಯಿತು. ಭವಿಷ್ಯ ನುಡಿಯುವ ಪ್ರವಾದಿಯಂತೆ ಅವನು ದೊಡ್ಡ ದನಿಯಲ್ಲಿ ಮಾತು ಮುಗಿಸಿದನು.

ಬಿಜ್ಜಳನ ಹುಬ್ಬುಗಳು ಗಂಟಿಕ್ಕಿದವು. ದೇಹ ಕಂಪಿಸಿತು. ತುಟಿಗಳು ಅದುರಿದವು. ಅಧಿಕಾರದ ದನಿಯಿಂದ ಅವನು,

“ದಂಡಾಜ್ಞೆ ಪ್ರಚಾರವಾಗಿ ಆಗಲೆ ಹನ್ನೆರಡು ದಿನಗಳು ಕಳೆದುಹೋಗಿವೆ. ಇನ್ನೆರಡು ದಿನಗಳಲ್ಲಿ ಅದು ಕಾರ್ಯಗತವಾಗುತ್ತದೆ. ಅದನ್ನು ವಿರೋಧಿಸುವವರು ಯಾರೇ ಆಗಲಿ ವಿಚಾರಣೆಯಿಲ್ಲದೆ ವಧಿಸಲ್ಪಡುವರು. ನೀವು ಈ ವಿಚಾರದಲ್ಲಿ ಪ್ರವೇಶಿಸುವುದು ವ್ಯರ್ಥ, ನನ್ನ ನಿರ್ಧಾರ ಬದಲಿಸುವುದಿಲ್ಲ” ಎಂದನು.

“ಹಾಗಾದರೆ ಮಹಾಸಂಘದ ಸೂಚನೆಯನ್ನು ನೀವು ತಿರಸ್ಕರಿಸುವಿರಾ?”
-ಸನ್ಯಾಸಿಯ ಕಂಠ ಗಡುಸಾಗಿ ಕೇಳಿಸಿತು.