ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೩೦೯


ಶಿವಭಕ್ತಿ ಭಾವೈಕ್ಯತೆಗಳನ್ನು ಸಾಧಿಸುವುದು ಶರಣಧರ್ಮದ ಮುಖ್ಯೋದ್ದೇಶವೆಂದು ನಾನು ತಿಳಿದಿದ್ದೇನೆ. ಮಧುವರಸ ಹರಳಯ್ಯಗಳು ವರ್ಣಧರ್ಮದ ಎರಡು ಧೃವಗಳು. ಆ ಎರಡು ಧೃವಗಳನ್ನು ಒಂದೇ ಸೂತ್ರದಿಮದ ಬಂಧಿಸಿ, ಶತಮಾನಗಳಿಂದ ಒಂದು ವರ್ಣ ಇನ್ನೊಂದು ವರ್ಣದ ಮೇಲೆ ನಡೆಸುತ್ತಿರುವ ಅನ್ಯಾಯ ಅತ್ಯಾಚಾರಗಳನ್ನು ತೊಡೆದು ಹಾಕಲು ಬಸವಣ್ಣನವರು ಪ್ರಯತ್ನಿಸಿದರು. ಶೀಲವಂತ ಲಾವಣ್ಯವತಿಯರ ಪತಿಪ್ರೇಮ ಸತೀಧರ್ಮಗಳು ಧೃವತಾರೆಗಳಾಗಿ ಬೆಳಗಲಿ.

“ಅಗ್ರಜ-ಅಂತ್ಯಜ, ವರ್ಣಧರ್ಮದ ಎರಡು ಧೃವಗಳು ;
ಒಂದು ಉತ್ತರ, ಇನ್ನೊಂದು ದಕ್ಷಿಣ. ನಡುವೆ ದೊಡ್ಡ ಕಮರಿ ! :ಅನುರಾಗದ ಗಾಳಿಬೀಸಿ, ಪ್ರೇಮಸೂತ್ರ ಬಂಧಿಸಿತ್ತು ಎರಡನ್ನು.
ಅಗ್ರಜನ ಪುತ್ರಿ ಅಂತ್ಯಜನಣುಗನ ಕೈ ಹಿಡಿದಳು.
ಸಾಧಿಸಿತ್ತು ಮಾನವತೆಯ ಮಹಾಸಿದ್ಧಿ ಶರಣರಲ್ಲಿ,
ನಿಃಕಲಂಕ ಮಲ್ಲಿಕಾರ್ಜುನಾ ! ನೋಡಿ ಬೆರಗಾದೆ ನಾನು !”
-ಎಂದು ಅವರು ಭಾಷಣ ಮುಗಿಸಿದ್ದರು.