ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೧೫


ಒಬ್ಬ ಹೆಂಗಸೂ, ಅವಳ ಕೈಹಿಡಿದಿದ್ದ ಐದಾರು ವರ್ಷದ ಒಬ್ಬ ತೇಜಸ್ವಿ ಬಾಲಕನೂ ಒಳಗೆ ಬಂದು ಕೈಮುಗಿದು ನಿಂತರು.

ಯಾರಿವರು?..... ಹಿಂದೆ ಎಲ್ಲಿಯೋ ನೋಡಿದಂತಿದೆ.......ಯಾರೆಂದು ನಿರ್ಧರಿಸಲಾರದೆ ಚೆನ್ನಬಸವಣ್ಣನವರು, “ನೀವು ಬಂದ ಕಾರ್ಯವೇನು?” ಎಂದು ಕೇಳಿದರು.

“ಅಣ್ಣನವರು ನನ್ನನ್ನು ಮರೆತಂತಿದೆ. ಚಾಲುಕ್ಯರಾಣಿ ಕಾಮೇಶ್ವರೀದೇವಿಯವರ ಮನೆಹೆಗ್ಗಡೆ ಅಗ್ಗಳನು ನಾನು. ದೇವಗಿರಿಯ ಶರಣಶಿಬಿರಕ್ಕೆ ರಾಣಿಯವರೊಡನೆ ತಮ್ಮ ಸಂದರ್ಶನಕ್ಕಾಗಿ ಬಂದಿದ್ದೆ,” ಎಂದು ಅಗ್ಗಳನು ತನ್ನ ಪರಿಚಯ ಹೇಳಿದನು.

ಚೆನ್ನಬಸವಣ್ಣನವರ ಮುಖ ಸ್ವಾಗತದ ಮಿದುನಗೆಯಿಂದ ಅರಳಿತು. “ನೀವು ರಾಣಿಯವರ ಸಂಗಡ ಮಂಗಳವೇಡೆಗೆ ಹೋಗಿದ್ದಿರಲ್ಲವೆ. ಅಗ್ನಿ ಅಪಘಾತ ನಡೆದಾಗ ನೀವು ಅಲ್ಲಿಯೇ ಇದ್ದಿರಬೇಕು. ರಾಣಿಯ ಮನೆಹೆಗ್ಗಡೆ ಶ್ರೀಮಂತ ಹರದನಾದದ್ದು ಹೇಗೆ?” ಎಂದು ಅವರು ಅಗ್ಗಳನನ್ನು ಕೇಳಿದರು.

“ಅದೊಂದು ಹೃದಯವಿದ್ರಾವಕ ದುರಂತಕಥೆ. ಅಣ್ಣನವರು ಅನುಮತಿ ಕೊಟ್ಟರೆ ಹೇಳುತ್ತೇನೆ,” ಎಂದು ಅಗ್ಗಳನು ಸಭೆಯಲ್ಲಿದ್ದವರ ಕಡೆ ನೋಡಿದನು.

ಚೆನ್ನಬಸವಣ್ಣನವರು ಇಂಗಿತವರಿತು, “ಇವರೆಲ್ಲರೂ ನಮ್ಮ ಆಪ್ತರು, ಅನುಭವ ಮಂಟಪದ ಆಧಾರಸ್ತಂಭಗಳಾದ ಮಹಾ ವಿಭೂತಿಗಳು. ಇವರೆದುರಿಗೆ ನೀವು ಯಾವ ರಹಸ್ಯವನ್ನಾಗಲಿ ಸಂಕೋಚವಿಲ್ಲದೆ ಹೇಳಬಹುದು,” ಎಂದು ಅಗ್ಗಳನಿಗೆ ಅಲ್ಲಿದ್ದವರೆಲ್ಲರ ಪರಿಚಯ ಮಾಡಿಕೊಟ್ಟರು ; ಬಾಗಿಲುಗಳನ್ನು ಮುಚ್ಚಿ, ಒಳಗೆ ಯಾರನ್ನೂ ಬಿಡಲಾಗದೆಂದು ವಟುವಿಗೆ ಹೇಳಿ ಹೊರಗೆ ಕಳುಹಿಸಿದರು.

ಆಮೇಲೆ ಅಗ್ಗಳನು ಮಂಗಳವೇಡೆಯಲ್ಲಿ ನಡೆದ ಎಲ್ಲ ಘಟನೆಗಳನ್ನು ಅವರಿಗೆ ವಿವರಿಸಿ ಹೇಳಿದನು. ಆ ಘಟನೆಗಳಲ್ಲಿ ಕೆಲವನ್ನು ಅವನು ಕಣ್ಣಾರೆ ಕಂಡಿದ್ದನು. ಉಳಿದುದನ್ನು ಎದುರಿಗಿದ್ದವರಿಂದ ಕೇಳಿ ತಿಳಿದಿದ್ದನು. ಕವಿಗೆ ಸಹಜವಾದ ಜಾಣ್ಮೆಯಿಂದ ಅವನು ಎಲ್ಲವನ್ನೂ ವಿವರಿಸಿ ಕೊನೆಗೆ ಹೇಳಿದನು.-

“ಅಗ್ನಿ ಅಪಘಾತ ನಡೆದ ಹಿಂದಿನ ರಾತ್ರಿ ರಾಣಿಯವರು ಉಳಿದುಕೊಂಡಿದ್ದ ಅರಮನೆಯ ಬಿಡಾರದಲ್ಲಿ ಏನು ನಡೆಯಿತೆಂಬುದು ಯಾರಿಗೂ ತಿಳಿಯದು. ಅತಿಥಿ ಸತ್ಕಾರದ ಸದ್ವರ್ತನೆ ಶಿಷ್ಟಾಚಾರಗಳನ್ನು ಗಾಳಿಗೆ ತೂರಿ ಬಿಜ್ಜಳನು ರಾಣಿಯವರ ಬಿಡಾರಕ್ಕೆ ಹೋಗಿ ಶೀಲಭಂಗಕ್ಕೆ ಪ್ರಯತ್ನಿಸಿದುದಾಗಿ ಜನರಲ್ಲಿ ಹರಡಿರುವ ಸುದ್ದಿ ನಿಜವೇ ಸುಳ್ಳೇ ಎಂಬುದನ್ನು ಖಚಿತವಾಗಿ ತಿಳಿಯುವುದು ಈಗ ಸಾಧ್ಯವಲ್ಲ. ಆ ರಾತ್ರಿ ರಾಣಿಯವರು ಬಹಳ ಹೊತ್ತು ಹೊರಗಿನ