ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೨೧

ಅವನು ಹಿಂದಿರುಗುವುದಿಲ್ಲವೆಂದೂ ತಿಳಿದು ಕ್ರಮಿತನು, "ಕರ್ಣದೇವರಸರ ಪರೋಕ್ಷದಲ್ಲಿ ಅರಮನೆಯ ಮುಖ್ಯಆಧಿಕಾರಿ ಯಾರು?" ಎಂದು ಕೇಳಿದನು.

ಅಷ್ಟರಲ್ಲಿ ರಾಜಗೃಹದ ಮನೆಹೆಗ್ಗಡೆ ಅಲ್ಲಿಗೆ ಬಂದನು. ಅವನಿಗೆ ಕ್ರಮಿತನ ಪರಿಚಯವಿತ್ತು. ಸಮೀಪಕ್ಕೆ ಬಂದು ನಮಸ್ಕಾರಮಾಡಿ, "ಒಡೆಯರು ಒಳಗೆ ದಯಮಾಡಿಸಬೇಕು," ಎಂದು ಕ್ರಮಿತ ಅಗ್ಗಳರನ್ನು ಮಹಾದ್ವಾರದ ಪಾರ್ಶ್ವದಲ್ಲಿದ್ದ ಅತಿಥಿಶಾಲೆಗೆ ಕರೆದುಕೊಂಡು ಹೋಗಿ ಸುಖಾಸನಗಳ ಮೇಲೆ ಕುಳ್ಳಿರಿಸಿ, "ಒಡೆಯರು ದಯಮಾಡಿ ಕಾರ್ಯಾವಸರವನ್ನು ತಿಳಿಸಿದರೆ ನನ್ನಿಂದಾಗುವುದೇ ನೋಡುತ್ತೇನೆ," ಎಂದನು.

"ನಾವು ಮಹಾರಾಜ ಜಗದೇಕಮಲ್ಲರಸರ ದರ್ಶನಕ್ಕಾಗಿ ಬಂದಿದ್ದೇವೆ," ಎಂದು ಹೇಳಿ ನಾರಣಕ್ರಮಿತನು ಬಿಜ್ಜಳನ ಆಜ್ಞಾಪತ್ರವನ್ನು ಹೆಗ್ಗಡೆಗೆ ಕೊಟ್ಟನು.

ಹೆಗ್ಗಡೆ ದೀಪದ ಬೆಳಕಿನಲ್ಲಿ ಮೌನವಾಗಿ ಆಜ್ಞಾಪತ್ರವನ್ನು ಓದಿಕೊಂಡನು. "ಈ ಪತ್ರವನ್ನು ತರುವ ಪಂಡಿತ ಕವಿ ಅಗ್ಗಳದೇವರು ಮಹಾರಾಜ ಜಗದೇಕ ಮಲ್ಲರಸರ ಸಮ್ಮುಖದ ಕಾವ್ಯೋಪದೇಶಕರಾಗಿ ನಿಯಮಿಸಲ್ಪಟ್ಟಿದ್ದಾರೆ. ಅರಮನೆಯ ಅತಿಥಿಗೃಹದಲ್ಲಿ ಅವರ ಸುಖವಸತಿಗೆ ಏರ್ಪಡಿಸತಕ್ಕದ್ದು," ಎಂದು ಬರೆದಿತ್ತು.

ಹೆಗ್ಗಡೆ ಕಣ್ಣಂಚಿನಿಂದ ಅಗ್ಗಳನ ಆಕಾರೇಂಗಿತಗಳನ್ನು ಪರಿಶೀಲಿಸುತ್ತ ಕ್ರಮಿತನ ಕಡೆ ತಿರುಗಿ, "ಬೇಟೆಗೆ ಹೋಗಿದ್ದ ಪ್ರಭುಗಳು ಇಂದು ಮಧ್ಯಾಹ್ನ ಹಿಂದಿರುಗಿದರು. ಈಗ ಅವರು ವಿಶ್ರಮಿಸಿಕೊಳ್ಳುತ್ತಿದ್ದಾರೆ. ಯಾರನ್ನೂ ನೋಡುವುದಿಲ್ಲ" ಎಂದು ಹೇಳಿದನು.

"ಹಾಗಾದರೆ ನೀವು ಪಂಡಿತ ಅಗ್ಗಳದೇವರಿಗೆ ಈ ರಾತ್ರಿ ಇಲ್ಲಿಯೇ ಬಿಡಾರ ಮಾಡಲು ಏರ್ಪಡಿಸಬೇಕಾಗುವುದು. ನಾಳಿನ ಬೆಳಿಗ್ಗೆ ನಾನೇ ಬಂದು ಇವರಿಗೆ ಪ್ರಭುಗಳ ದರ್ಶನ ಮಾಡಿಸುತ್ತೇನೆ."

ಆಜ್ಞಾಪತ್ರದ ಒಕ್ಕಣೆಗೂ ಕ್ರಮಿತನು ಹೇಳಿದುದಕ್ಕೂ ಇದ್ದ ಅಂತರವನ್ನು ಗಮನಿಸಿ ಹೆಗ್ಗಡೆ, 'ಇದರಲ್ಲೇನೋ ರಹಸ್ಯವಿದೆ. ಯಥಾಕಾಲದಲ್ಲಿ ಅದು ಹೊರಗೆ ಬೀಳುವುದು' ಎಂದು ಭಾವಿಸಿ ಪ್ರಕಟವಾಗಿ, "ಆಜ್ಞಾಪತ್ರದಂತೆ ನಡೆಯುತ್ತೇನೆ" ಎಂದು ಹೇಳಿ ಹೊರಗೆ ಹೋದನು.

ಇದುವರೆಗೆ ಮೌನವಾಗಿ ಕುಳಿತಿದ್ದ ಅಗ್ಗಳನು ಕೋಪಗೊಂಡವನಂತೆ ಕ್ರಮಿತನನ್ನು ದುರದುರನೆ ನೋಡುತ್ತ "ನಿಮ್ಮ ಉದ್ದೇಶವೇನು ಧರ್ಮಾಧಿಕಾರಿಗಳೇ? ನನ್ನನ್ನು ಇಲ್ಲಿ ಸೆರೆಯಿಡುವುದಕ್ಕಾಗಿ ಕರೆ ತಂದಿರಾ?" ಎಂದು ಕೇಳಿದನು.

ಕ್ರಮಿತನು ನಸು ನಕ್ಕು "ಬಿಜ್ಜಳರಾಯರು ಹೇಳಿದುದು ನೆನಪಿದೆಯೆ?