ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೩೫


ಬೆಳೆಯುತ್ತಿದೆ. ಮುಂದೇನಾಗುವುದೋ ಯಾರಿಗೂ ತಿಳಿಯದು.” ಜಗದೇಕಮಲ್ಲನ ಅಚ್ಚರಿ ಇಮ್ಮಡಿಸಿತು. ಪ್ರಸಕ್ತ ರಾಜಕೀಯವನ್ನು ಕುರಿತ ಮೌನ ಅನಾಸಕ್ತಿಗಳೇ ತನ್ನ ರಕ್ಷಾಕವಚವೆಂದು ಭಾವಿಸಿ, “ಇವೆಲ್ಲ ನನಗೆ ತಿಳಿಯದ ವಿಚಾರಗಳು, ಕರ್ಣದೇವ. ನೀನು ನನ್ನೊಡನೆ ಈ ವಿಚಾರಗಳನ್ನು ಪ್ರಸ್ತಾಪಿಸಿದೆಯೆಂದು ತಿಳಿದರೂ ಬಿಜ್ಜಳರಾಯರು ನಿನ್ನ ಮೇಲೆ ಕೋಪ ಮಾಡುವರು,” ಎಂದು ನಯವಾಗಿ ಉತ್ತರಕೊಟ್ಟನು.

ಕರ್ಣದೇವ ಹಠಾತ್ತಾಗಿ ಉತ್ತೇಜಿತನಾದನು. ನಿರಂತರ ಪಾನಾಸಕ್ತರಿಗೆ ಸಹಜವಾದ ಕ್ಷಣಿಕ ಆವೇಶದಿಂದ, “ಬಿಜ್ಜಳರಾಯರು ! ಮಂಗಳವೇಡೆಯ ಅಗ್ನಿದಾಹದಿಂದ ಅವರ ಸ್ವಭಾವದಲ್ಲಿ ಬದಲಾವಣೆಯಾಗಿದೆ, ಭಂಡರಾಜ. ಈಗ ಅವರು ಹಿಂದಿನಂತಿಲ್ಲ. ಬುದ್ದಿಭ್ರಮೆಯಾದವರಂತೆ ತಮ್ಮ ಹಿತಾಸಕ್ತಿಗಳನ್ನೂ ಮರೆತು ಕಾರ್ಯ ನಡೆಸುತ್ತಿದ್ದಾರೆ. ಮುಂದೆಯೂ ಹೀಗಾದರೆ ಕಲಚೂರ್ಯ ಗೌರವ ಪ್ರತಿಷ್ಠೆಗಳು ಮಣ್ಣುಗೂಡಿದಂತೆಯೆ,” ಎಂದು.

ಕರ್ಣದೇವನ ಸಲಹೆಯಿಂದಲೋ, ರಾಜಕೀಯದ ಸುಳಿವು ತಿಳಿದು ಮುನ್ನೆಚ್ಚರಿಕೆಯಿಂದಲೋ ಮನೆಹೆಗ್ಗಡೆ ಈ ಮೊದಲೆ ಅಲ್ಲಿದ್ದ ಪಸಾಯಿತರನ್ನು ಹೊರಗೆ ಕಳುಹಿಸಿದ್ದನ್ನು ಗಮನಿಸಿದ ಜಗದೇಕಮಲ್ಲನು ವಿವೇಕ ಜಾಗರೂಕತೆಗಳನ್ನು ಮರೆತು, ಕುಹಕದ ನಗೆ ಬೀರಿ, “ನಿನ್ನ ಮಾತುಗಳನ್ನು ಕೇಳಿದರೆ ಬ್ರಹ್ಮೇಂದ್ರ ಶಿವ ಯೋಗಿಗಳ ಒಂದು ನುಡಿ ನೆನಪಿಗೆ ಬರುತ್ತದೆ. ಕರ್ಣದೇವ,” ಎಂದನು.

“ಯಾವುದು ಆ ನುಡಿ?” ಕರ್ಣದೇವ ಕೇಳಿದನು.

“ದೇವತೆಗಳು ಯಾವನ ವಿನಾಶವನ್ನು ಇಚ್ಚಿಸುವರೋ ಅವನನ್ನು ಮೊದಲು ಉನ್ಮತ್ತನನ್ನಾಗಿ ಮಾಡುವರು ಎಂದು. ಯಸ್ಯೇಚ್ಛಂತಿ ಸುರಾಃ ವಿನಾಶಮಭವತ್ ತಸ್ಯಾದ ಬುದ್ಧಿಭ್ರಮಃ-ಬಿಜ್ಜಳರಾಯರ ವಿಚಾರದಲ್ಲಿ ದೇವತೆಗಳು ಕೋಪಗೊಂಡಿದ್ದಾರೆ.

ಕರ್ಣದೇವ ತುಸು ಹೊತ್ತು ಮೌನವಾಗಿ ಯೋಚಿಸುತ್ತಿದ್ದು, ಕೈಯಲ್ಲಿದ್ದ ಪಾನಪಾತ್ರೆಯಿಂದ ಇನ್ನೆರಡು ಗುಟುಕು ಮಧುವನ್ನು ಹೀರಿ, “ಅಣ್ಣನವರ ವಿಚಾರದಲ್ಲಿ ಬ್ರಹ್ಮೇಂದ್ರ ಶಿವಯೋಗ ಈ ಮಾತು ಹೇಳಿದರೆ?” ಎಂದನು.

ಜಗದೇಕಮಲ್ಲ ಉತ್ತರ ಕೊಟ್ಟನು : " ಈ ಶಿವಯೋಗಿಗಳು ಹೇಳುವುದೆಲ್ಲ ಪುರಾಣ ಕಥೆಗಳು, ಕರ್ಣದೇವ. ವಾಸ್ತವ ಜಗತ್ತನ್ನೇ ಮರೆಯುತ್ತಾರೆ ಅವರು. ಪ್ರಸ್ತುತ ರಾಜಕೀಯವೆಂದರೆ ಬ್ರಹ್ಮೇಂದ್ರ ಶಿವಯೋಗಿಗಳಿಗೆ ತುಂಬ ಅಸಹನೆ. ಆ ಚಿದಂಬರ ರಹಸ್ಯ ನಮಗೇಕೆ? ಎಂದುಬಿಡುತ್ತಾರೆ. ಈಗಲೂ ವಿಕ್ರಮಾದಿತ್ಯ