ಈ ಪುಟವನ್ನು ಪರಿಶೀಲಿಸಲಾಗಿದೆ

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

೩೪೧


ಹೆಗ್ಗಡೆ ಪರ್ಯಂಕದ ಕಡೆ ದೃಷ್ಟಿ ಹಾಯಿಸಿ, “ಒಡೆಯರು ನಿದ್ದೆಮಾಡಿದಂತಿದೆ. ಪ್ರಭುಗಳನ್ನು ಬಿಡಾರಕ್ಕೆ ಬಿಜಯ ಮಾಡಿಸುತ್ತೇನೆ,” ಎಂದನು.

“ಇನ್ನು ಮುಂದೆ ಈ ಹಗರಣ ನಮಗೊಪ್ಪುವುದಿಲ್ಲ, ಹೆಗ್ಗಡೆಗಳೆ. ನಾಳಿನಿಂದ ಪ್ರವಚನಕ್ಕೆ ಏರ್ಪಡಿಸಿರಿ,” ಎಂದು ಹೇಳಿ ಜಗದೇಕಮಲ್ಲನು ಹೆಗ್ಗಡೆಯೊಡನೆ ಅಲ್ಲಿಂದ ನಿರ್ಗಮಿಸಿದನು.

***

ವಾಸಗೃಹದ ಏಕಾಂತದಲ್ಲಿ, ದೀಪದ ಮುಂದೆ ಕುಳಿತು, ಕಡಿತವೊಂದರ ಮರೆಯಲ್ಲಿ ಜಗದೇಕಮಲ್ಲನು ಉಷಾವತಿಯ ಪತ್ರವನ್ನು ಓದಿದನು. ಪತ್ರದ ಒಕ್ಕಣೆ ಮುಂದೆ ಕಂಡಂತಿತ್ತು.

ಪ್ರಭುವರ್ಯರ ಚರಣದಲ್ಲಿ ದಾಸಿಯ ಬಿನ್ನಪ:

ರಾಜಗೃಹದ ಅಲಂಕಾರದ ಕೋಣೆಯಲ್ಲಿ ಕುಳಿತು, ನಿಮ್ಮನ್ನು ನೋಡುವ ಅವಕಾಶ ದೊರಕುವ ನಿರೀಕ್ಷೆಯಿಂದ ಬರೆಯುತ್ತಿದ್ದೇನೆ. ಅಗ್ನಿದಾಹ ನಡೆದ ಹಿಂದಿನ ರಾತ್ರಿ ರಾಣಿಯವರು ತಮ್ಮ ಬಿಡಾರದಲ್ಲಿ ಸಂದೇಶದ ನುಡಿಗಳನ್ನು ನನಗೆ ಪಾಠ ಮಾಡಿಸಿದರು. ಆಮೇಲೆ ಅವರು ಮುಂಜಾವಿನಲ್ಲಿ ಕುಮಾರ ಪ್ರೇಮಾರ್ಣವನನ್ನು ನನ್ನೊಡನೆ ಕಳುಹಿಸಿದರು. ಕುಮಾರನನ್ನು ಕಲ್ಯಾಣಕ್ಕೆ ಕರೆದುಕೊಂಡು ಹೋಗಿ ಚೆನ್ನಬಸವಣ್ಣನವರಿಗೊಪ್ಪಿಸಿ ಸುರಕ್ಷಿತವಾಗಿ ಕರ್ಹಾಡಕ್ಕೆ ಕಳುಹಿಸುವಂತೆ ನಾನು ಪ್ರಾರ್ಥಿಸಿದನೆಂದು ತಿಳಿಸಬೇಕಾಗಿ ಆಜ್ಞೆ ಮಾಡಿದರು. ಮನೆಹೆಗ್ಗಡೆ ಅಗ್ಗಳದೇವರ ಸಹಾಯದಿಂದ ನಾನು ಆ ಕಾರ್ಯ ನಿರ್ವಹಿಸಿದ್ದೇನೆ.

ರಾಣಿಯವರ ಸಂದೇಶವನ್ನು ನಾನು ಮರೆಯಬಹುದೆಂದು, ಅಥವಾ ಸಂದೇಶದ ನುಡಿಗಳನ್ನು ನಿಮ್ಮೆದುರಿಗೆ ಪಠಿಸಲು ಸಾಕಾದಷ್ಟು ಸಮಯ ಸಿಕ್ಕದಿರಬಹುದುದೆಂದು ವಸ್ತ್ರದ ತುಂಡೊಂದರಲ್ಲಿ ಬರೆದಿಟ್ಟುಕೊಂಡೆ. ಪ್ರವಾಸದಲ್ಲಿ ನನ್ನ ಎದೆಕಟ್ಟಾಗಿ ಅದು ಯಾವಾಗಲೂ ನನ್ನ ಮೈ ಮೇಲಿರುತ್ತಿತ್ತು. ಈಗ ಅದನ್ನು ಬಿಚ್ಚಿ ಸಂಗಡ ಇಡುತ್ತಿದ್ದೇನೆ. ಪ್ರಭುವರ್ಯರು ಒಪ್ಪಿಸಿಕೊಳ್ಳಬೇಕು.

ಉಷಾವತಿ.

ಎಂತಹ ಚತುರೆ ಈ ಹೆಣ್ಣು. ನನ್ನನ್ನು ನೋಡುವ ಉದ್ದೇಶದಿಂದಲೆ ವಣಿಕ್ ಪುತ್ರಿಯ ಸೋಗಿನಲ್ಲಿ ರಾಜಗೃಹಕ್ಕೆ ಬಂದಳು. ಮನೆಹೆಗ್ಗಡೆ ಇವಳಿಂದ ವಂಚಿಸಲ್ಪಟ್ಟನೆ? ಅಥವಾ ಒಳಸಂಚಿನಲ್ಲಿ ಅವನೂ ಸೇರಿರುವನೆ? ಎಂದು ಮುಂತಾಗಿ ಯೋಚಿಸುತ್ತ