ಈ ಪುಟವನ್ನು ಪರಿಶೀಲಿಸಲಾಗಿದೆ

೩೫೦

ಕ್ರಾಂತಿ ಕಲ್ಯಾಣ


ಇರುಳೆಲ್ಲ ಜಾಗರ ಮಾಡಿದನೋ ಅದು ಕೈಗೆ ನಿಲುಕುವಂತಾಯಿತೆಂದು ಅವನ ಉತ್ಸಾಹ ಸಿಡಿದೆದ್ದು ರಕ್ತಸಿಕ್ತವಾದ ಸುರಗಿಯಂತೆ ಕಣ್ಣುಗಳ ಮುಂದೆ ಸುಳಿಯಿತು.

ಬೊಮ್ಮರಸನು ಪುನಃ ದನಿ ತಗ್ಗಿಸಿ, ಮಿಂಚಿನ ಮೊನೆಯಂತೆ ತೀಕ್ಷವಾದ ದೃಷ್ಟಿಯಿಂದ ಜಗದೇಕಮಲ್ಲನನ್ನು ನೋಡುತ್ತ ಹೇಳಿದನು : “ಬಿಜ್ಜಳನಂತಹ ಪ್ರಜಾಪೀಡಕನಾದ ರಾಜ್ಯಾಪಹಾರಿಯನ್ನು ಕಳುವಿನಿಂದ ಕೊಂದುಬರುವುದರಲ್ಲಿ ಸಾಮರ್ಥ್ಯವೇನಿದೆ? ಕೃತ್ಯ ಮುಗಿಸಿದೊಡನೆ 'ಹರಳಯ್ಯ ಮಧುವಯ್ಯಗಳ ನೋಯಿಸಿದ ಪರವಾದಿ ಬಿಜ್ಜಳನನ್ನು ಕೊಂದ ನಾವು ವೀರಕುಮಾರರು, ಜಗದೇಕಮಲ್ಲ ಬೊಮ್ಮರಸರು,' ಎಂದು ಬೊಬ್ಬೆಯಿಟ್ಟು ಸಾರುತ್ತ ಬರಬೇಕು. ನಾಗರಿಕ ಕ್ರಾಂತಿಗೆ ಅದು ವೀರ ಕಹಳೆಯಾಗುವುದು.”

ಜಗದೇಕಮಲ್ಲನು ಚಮತ್ಕೃತನಾದನು.
ತುಸು ಹೊತ್ತು ಇಬ್ಬರೂ ಮೌನ.

ಆಮೇಲೆ ಜಗದೇಕಮಲ್ಲನು ಮೆಚ್ಚುಗೆಯ ತುಂಬುಕಂಠದಿಂದ ಹೇಳಿದನು: “ನಿನ್ನ ಈ ಜಂಗಮ ವೇಷ ನನ್ನನ್ನು ವಂಚಿಸಿತು, ಬೊಮ್ಮರಸ. ವಾಸ್ತವವಾಗಿ ನೀನು ಸನ್ಯಾಸಿಯಾದೆಯೆಂದು ಭಾವಿಸಿದೆ. ಕ್ರಾಂತಿಯ ಕಿಡಿ ಇನ್ನೂ ನಿನ್ನಲ್ಲಿ ಜೀವಂತವಾಗಿದೆ.”

ಬೊಮ್ಮರಸನು ಉತ್ತರಿಸಿದನು : “ಕ್ರಾಂತಿಯಲ್ಲಿ ಅಮರತ್ವ ಅಡಗಿದೆ, ಜಗದೇಕ. ಒಂದು ಸಾರಿ ಹತ್ತಿಸಿಟ್ಟ ಕ್ರಾಂತಿಯ ಸೊಡರು ತನ್ನ ಉದ್ದೇಶ ಸಾಧಿಸುವವರೆಗೆ ಆರುವುದಿಲ್ಲ.”

ಹೊರಗೆ ಹೆಜ್ಜೆಯ ಸಪ್ಪಳ ಕೇಳಿಸಿತು. ಜಗದೇಕಮಲ್ಲ ಪಸಾಯಿತನನ್ನು ಹೆಸರು ಹಿಡಿದು ಕರೆದನು.

ಅವನು ಒಳಗೆ ಬಂದಾಗ ಅಧ್ಯಯನ ಮುಗಿದು, ಜಗದೇಕಮಲ್ಲನು ವಚನ ಸಂಗ್ರಹದ ಹೊತ್ತಿಗೆಗಳನ್ನು ಪಾರ್ಶ್ವದ ಪೀಠದ ಮೇಲೆ ಜೋಡಿಸಿಡುತ್ತಿದ್ದನು.

***

ಹೆಗ್ಗಡೆ ಮೊದಲೇ ಹೇಳಿದ್ದಂತೆ ರಾಜಗೃಹದ ಮೇನೆ ಉಷಾವತಿಯನ್ನು ಮರುದಿನ ಮುಂಜಾವಿನಲ್ಲಿ ನಗರ ಮಧ್ಯದ ತ್ರಿಪುರಾಂತಕ ದೇಗುಲದ ಹತ್ತಿರ ಬಿಟ್ಟಿತು. ದೇಗುಲದಲ್ಲಿ ಪೂಜಾರಂಭವಾಗಿತ್ತು. ಮಂಗಳ ವಾದ್ಯಗಳು ಮೊಳಗುತ್ತಿದ್ದವು. ಸ್ತ್ರೀ ಪುರುಷರು ಶುಚಿರ್ಭೂತರಾಗಿ ಮಡಿಬಟ್ಟೆಗಳನ್ನುಟ್ಟು ಕೈಯಲ್ಲಿ ಪೂಜಾದ್ರವ್ಯಗಳನ್ನು ಹಿಡಿದು ಬರುತ್ತಿದ್ದರು.

ಉಷಾವತಿ ಮಹಾದ್ವಾರದಲ್ಲಿ ಕೈಮುಗಿದು ನಿಂತು, ತಾನು ಉದ್ದೇಶಿಸಿದ್ದ