ಈ ಪುಟವನ್ನು ಪರಿಶೀಲಿಸಲಾಗಿದೆ

೩೫೪

ಕ್ರಾಂತಿ ಕಲ್ಯಾಣ


ತೆಗೆದುಕೊಳ್ಳದಿರುವುದು ಅಪರಿಗ್ರಹ. ಮುಂದೆ ನಮಗೆ ಬೇಕಾಗುವುದೆಂಬ ಲೋಭದಿಂದ ಧನ ಧಾನ್ಯಗಳನ್ನು ಕೂಡಿಡದಿರುವುದು ಅಸಂಗ್ರಹ. ಬಸವಣ್ಣನವರು ಮಂತ್ರಿ ಪದವಿಯನ್ನು ಬಿಟ್ಟು ಮಹಮನೆಗೆ ಬಂದ ಮೇಲೆ ಶರಣರು ಬಿಜ್ಜಳನ ದಬ್ಬಾಳಿಕೆಯನ್ನು ತಡೆಯಲಾರದೆ ಕಲ್ಯಾಣವನ್ನು ಬಿಟ್ಟು ಹೋಗಲು ನಿರ್ಧರಿಸಿರುವುದರಿಂದ, ಅತಿಥಿ ಅಭ್ಯಾಗತರಿಗಾಗಿ, ಕಾಲಕಾಲಕ್ಕೆ ನಡೆಯುವ ದಾಸೋಹಕ್ಕಾಗಿ ಸೇರಿಸಿದ್ದ ಧನ ಧಾನ್ಯ ಪಾತ್ರೆ ಪದಾರ್ಥಗಳನ್ನು ಜಂಗಮ ಸನ್ಯಾಸಿ ದೀನ ದರಿದ್ರರಿಗೆ ಹಂಚುತ್ತಿದ್ದಾರೆ. ನಾಳೆಗೆ ಈ ಕಾರ್ಯ ಮುಗಿಯುವುದು. ಆಮೇಲೆ ಅವರು ಯಾವ ಕ್ಷಣದಲ್ಲಾದರೂ ಕಲ್ಯಾಣವನ್ನು ಬಿಡಬಹುದು.”

“ರಾಜಪ್ರಾಸಾದದಂತಿರುವ ಈ ದೊಡ್ಡ ಮನೆ, ಅನುಭವಮಂಟಪ, ಅತಿಥಿ ಶಾಲೆ, ಇವೆಲ್ಲವನ್ನೂ ಬಿಟ್ಟು ಹೋಗುವರೆ?” -ಉಷಾವತಿಯ ಕುತೂಹಲ ಇಮ್ಮಡಿಸಿತ್ತು.

ಅಗ್ಗಳನ ದನಿ ಗಂಭೀರವಾಯಿತು. ಅವನು ಹೇಳಿದನು : “ನಮ್ಮ ಮನೆ ಮಠ ಸಿರಿ ಸಂಪತ್ತುಗಳು ಎಷ್ಟೆ ದೊಡ್ಡದಾಗಿರಲಿ, ಮೃತ್ಯುವಿನ ಕರೆ ಬಂದಾಗ ಬಿಟ್ಟು ಹೋಗಲೇಬೇಕಲ್ಲವೇ ? ಅಂಜದೆ ಅಳುಕದೆ ಮರಣವನ್ನು ಮಾನ್ಯ ಅತಿಥಿಯೆಂದು ತಿಳಿದು ಆದರದಿಂದ ಸ್ವಾಗತಿಸಿ ಬರಮಾಡಿಕೊಳ್ಳುವುದು ಶರಣಧರ್ಮದ ಇನ್ನೊಂದು ತತ್ವ. ಎಂದಾದರೊಂದು ದಿನ ಮಾಡಬೇಕಾದ ಕಾರ್ಯವನ್ನು ಮಹಮನೆಯ ಶರಣರು ಇಂದೇ ಮಾಡುತ್ತಿದ್ದಾರೆ.”

“ಅನುಭವಮಂಟಪದ ಸರಸ್ವತೀ ಭಂಡಾರದಲ್ಲಿ ಅನೇಕ ಅಮೂಲ್ಯಗ್ರಂಥಗಳು ಸಂಗ್ರಹಿಸಲ್ಪಟ್ಟಿರುವುದೆಂದು ರಾಣಿಯವರು ಹೇಳುತ್ತಿದ್ದರು. ಮುಂದೆ ಅವುಗಳ ಗತಿ?”

“ಸರಸ್ವತೀ ಭಂಡಾರದ ಅಮೂಲ್ಯ ಗ್ರಂಥಗಳನ್ನು, ವಚನ ಸಂಗ್ರಹಗಳನ್ನು, ಸುರಕ್ಷಿತವಾದ ಸ್ಥಳಗಳಿಗೆ ಕಳುಹಿಸುವ ಕಾರ್ಯ ಈಗೊಂದು ವಾರದಿಂದ ನಡೆಯುತ್ತಿದೆ. ಆಗಲೇ ಭಂಡಾರದ ಬಹು ಭಾಗವನ್ನು ಗಾಡಿಗಳ ಮೇಲೆ ಕಳುಹಿಸಿದ್ದಾರೆ.”

“ನಾಗಲಾಂಬೆ, ನೀಲಲೋಚನೆ, ಬಾಲಕ ಸಂಗಮನಾಥ, ಉಳಿದ ಶರಣೆಯರು. -ಎಲ್ಲರೂ ಸಂಗಡ ಹೋಗುವರೆ?”

“ಎಲ್ಲರೂ ಒಟ್ಟಿಗೆ ಹೋಗಬೇಕೆಂದು ಚೆನ್ನಬಸವಣ್ಣನವರ ಯೋಚನೆ. ಕಲ್ಯಾಣದ ಶೈವಮಠಗಳ ಜಂಗಮರೂ ಸಂಗಡ ಹೋಗುತ್ತಾರೆ.

ಉಷಾವತಿ ಕೆಲವು ಕ್ಷಣಗಳು ಯೋಚಿಸುತ್ತಿದ್ದು, “ನಾನು ಕರ್ಹಾಡಕ್ಕೆ