ಈ ಪುಟವನ್ನು ಪರಿಶೀಲಿಸಲಾಗಿದೆ

೩೫೬

ಕ್ರಾಂತಿ ಕಲ್ಯಾಣ


ಆಹ್ವಾನಕ್ಕೆ ಶೈವಮಠಗಳವರು ಕಳುಹಿಸಿದ ಕೆಲವು ಉತ್ತರಗಳು ಅಷ್ಟೇ ವಿಚಿತ್ರವಾಗಿದ್ದವು.

“ನಮಗಿನ್ನೂ ಮರ್ತ್ಯಲೋಕದ ಭೋಗ ಸವೆದಿಲ್ಲ. ನೀವು ಕೈಲಾಸಕ್ಕೆ ಹೋಗಿ ಹಿಂದಿರುಗುವ ಪರಿಯಂತ ನಾವು ಗಿರಿಗುಹೆಗಳಲ್ಲಿ ವಾಸಮಾಡುವೆವು. ನೀವು ಪುನಃ ಮರ್ತ್ಯಕ್ಕೆ ಬಂದಾಗ ನಾವು ಬಂದು ಪೂಜೆಯ ಕೈಗೊಳ್ಳುವೆವು. ನೀವು ಚಿತ್ತೈಸಿ,” ಎಂದು ಬರೆದಿದ್ದರು ಒಬ್ಬ ಭೋಗಾಸಕ್ತ ಮಠಪತಿ.

ಇನ್ನೊಬ್ಬ ಮಠದೊಡೆಯರು ತಾವೇ ಮಹಮನೆಗೆ ಬಂದು, “ಕೇಳಯ್ಯ ಚೆನ್ನಬಸವಣ್ಣ. ನೀವು ಒಂದು ಬಾರಿ ಕೈಲಾಸಕ್ಕೆ ಹೋಗಿ ಬಾಹ ಪರಿಯಂತರ ನಾವು ಹತ್ತು ಹತ್ತು ಬಾರಿ ಘಟವ ತೊಟ್ಟು ತೊಟ್ಟು ಬಂದೆವು. ನೀವು ಚಿತ್ತೈಸಿ,” ಎಂದು ಹೇಳಿದರು.

“ಇನ್ನೆರಡು ದಿನಗಳು ಮರ್ತ್ಯದಲ್ಲಿದ್ದು ಪೂಜೆಗೊಳ್ಳಬೇಕೆಂದು ನಾವು ಇಚ್ಚಿಸುತ್ತೇವೆ. ಈ ದೇಹ ಜೀರ್ಣವಾದರೂ ಇನ್ನೊಂದು ದೇಹವನ್ನು ಧರಿಸಿ ನೀವು ಪುನಃ ಬಂದಾಗ ನಾವು ಪೂಜೆಗೊಂಡಿಹೆವು. ನೀವು ಎಲ್ಲಿದ್ದರೂ ಶಿವಗಣಂಗಳು ನಮ್ಮ ಪೂಜೆಯ ಮಾಡುವ ಕಾರಣ, ನಿಮ್ಮನ್ನಗಲಿದ ಚಿಂತೆಯಲ್ಲದೆ ನಮಗೆ ಮತ್ತಾವ ಚಿಂತೆಯೂ ಇಲ್ಲ, ಸ್ವಾಮಿಗಳೆ,” ಎಂದು ಇನ್ನೊಬ್ಬ ವೃದ್ಧ ಜಂಗಮರು ಮಠದ ಕಾರ್ಯಕರ್ತನ ಮುಖಾಂತರ ಹೇಳಿ ಕಳುಹಿಸಿದ್ದರು.

ಇನ್ನೊಬ್ಬ ಆಚಾರಶೀಲ ಮಠಾಧಿಕಾರಿ ಈ ರೀತಿ ಬರೆದಿದ್ದರು : “ನಾಗಲಾಂಬಿಕೆಯ ಗಣಪರ್ವದಲ್ಲಿ ಪ್ರಭುದೇವರು ನಮಗೆ ಪ್ರಸಾದವನ್ನು ತವನಿಧಿಯಾಗಿ ದಯಪಾಲಿಸಿದ್ದಾರೆ. ನೀವು ಪುನಃ ಬರುವ ಪರಿಯಂತ ಆ ಪ್ರಸಾದ ತೀರದು. ನಾವು ಮಠದ ನೆಲಮಾಳಿಗೆಯಲ್ಲಿ ಯಾರೂ ಕಾಣದ ಹಾಗೆ ಇರುತ್ತೇವೆ. ಮರ್ತ್ಯದ ಪಾಪಿಗಳಿಗೆ ಆ ನೆಲಮಾಳಿಗೆಯ ಬಾಗಿಲು ಕಾಣಿಸದು. ನೀವು ಸುಖದಲ್ಲಿ ಹೋಗಿ ಬನ್ನಿರಿ.”

ಇಂತಹ ಹಲವಾರು ಉತ್ತರಗಳನ್ನು ಓದಿ ಕೇಳಿದಾಗ ಚೆನ್ನಬಸವಣ್ಣನವರಿಗೆ ವಿಷಾದವೆನಿಸಿತು. ತಮ್ಮೊಡನಿದ್ದ ಮಾಚಿದೇವ ಸಕಲೇಶ ಮಾದರಸರ ಕಡೆ ತಿರುಗಿ ಅವರು, “ಶರಣಧರ್ಮದ ಅಸ್ತಿತ್ವ ರಕ್ಷಣೆಗಳಿಗಾಗಿ ನಾವು ಈ ಕಾರ್ಯ ಮಾಡಬೇಕಾಗಿದೆ. ಅದನ್ನು ಅರಿತುಕೊಳ್ಳುವ ಸಹನೆಯೂ ಇಲ್ಲ ಇವರಿಗೆ !” ಎಂದು ನುಡಿದು ಮೌನವಾಗಿ ಕುಳಿತರು.

ಸಕಲೇಶ ಮಾದರಸರು ನಸು ನಕ್ಕು ಹೇಳಿದರು : “ನೀವು ಇಷ್ಟಕ್ಕೇಕೆ ಚಿಂತಿಸಬೇಕು, ಚೆನ್ನಬಸವಣ್ಣನವರೆ?”

“ಯೋಗಿ, ಜೋಗಿ, ತಪಸಿ, ಸನ್ಯಾಸಿ ಮೀಮಾಂಸಕ,