ಈ ಪುಟವನ್ನು ಪ್ರಕಟಿಸಲಾಗಿದೆ

೨೪

ಕ್ರಾಂತಿ ಕಲ್ಯಾಣ

ಬಾಂಧವರ ಓಣಿಯಲ್ಲಿ ಕಲ್ಯಾಣದ ನಾಗರಿಕರು ಬಸವಣ್ಣನವರನ್ನು ಬೀಳ್ಕೊಂಡಾಗಿನ ದೃಶ್ಯ ಈಗಲೂ ಅವನ ಕಣ್ಣಿಗೆ ಕಟ್ಟಿದಂತಿತ್ತು. ಒಂದು ಕಡೆ ಬಸವಣ್ಣನವರು ಮತ್ತು ಗಂಗಾಬಿಕೆ, ಇನ್ನೊಂದು ಕಡೆ ಮಾರಯ್ಯನವರು ಮತ್ತು ರಾಣಿ ಮಹಾದೇವಿ, ಸುತ್ತ ಕಲ್ಯಾಣದ ನಾಗರಿಕರು, ಹಿನ್ನೆಲೆಯಲ್ಲಿ ಬಾಂಧವರ ಓಣಿಯ ಪ್ರಕೃತಿರಮ್ಯವಾದ ಮರ ಗಿಡಗಳು, ವಿದಗ್ಧನಾದ ಚಿತ್ರ ಶಿಲ್ಪಿ ರಚಿಸಿದ ಭವ್ಯ ಚಿತ್ರ ತನ್ನ ಕಣ್ಣೆದುರಿಗೆ ಜೀವತಳೆದಂತೆ ಅಗ್ಗಳನು ಭಾವಿಸಿದನು.

ಜಗದೇಕಮಲ್ಲನನ್ನು ನೋಡಲು ಬೊಮ್ಮರಸನು ಇದುವರೆಗೆ ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿದ್ದವು. 'ಈಗ ಅವಕಾಶ ತಾನಾಗಿ ನನಗೆ ದೊರಕಿದೆ. ಕಾಮೇಶ್ವರಿಯ ಸಂಚಿಗೆ ಸಹಾಯವಾಗುವ೦ತೆ ಅದನ್ನು ಸದುಪಯೋಗಪಡಿಸಿಕೊಳ್ಳುವುದು ಹೇಗೆ?' ಎಂದು ಯೋಚಿಸುತ್ತ ಅಗ್ಗಳನು ರಾತ್ರಿಯನ್ನು ಕಳೆದನು.

***

ಮರುದಿನ ಬೆಳಗ್ಗೆ ಅವನಿಗೆ ಎಚ್ಚರವಾದಾಗ ತರುಣದಾಸಿ ತೊಡೆಯ ಮೇಲೆ ಕಾಡಿಗೆಯಿಂದ ಮಾಡಿದ್ದ ನಾಲ್ಕು ಬೆರಳು ಗುರುತುಗಳನ್ನು ನೀರಿನಿಂದ ತೊಳೆದು ಅಳಿಸುತ್ತಿದ್ದಳು.

ಅಗ್ಗಳನು ನಸು ನಕ್ಕು, "ಏನು ಮಾಡುತ್ತಿರುವೆ?" ಎಂದು ಕೇಳಿದನು.

"ನಿಮ್ಮ ತುಂಟತನದ ಗುರುತುಗಳನ್ನು ಅಳಿಸುತ್ತಿದ್ದೇನೆ." -ದಾಸಿ ಕಡೆ ನೋಟ ಬೀರಿ ಉತ್ತರ ಕೊಟ್ಟಳು.

"ಅಳಿಸಿದ ಮಾತ್ರಕ್ಕೆ ಹೋಗುವ ಗುರುತುಗಳೇ ಅವು?"

"ನಿಜ, ಹೋಗುವುದಿಲ್ಲ. ಆದರೆ ಪುನಃ ಗುರುತು ಮಾಡಲು ಹಲಗೆಯನ್ನು ತೊಳೆದು ಸಿದ್ಧಪಡಿಸಬೇಕಲ್ಲವೆ?"

"ಇನ್ನೆರಡು ದಿನಗಳು ಹಲಗೆ ಬಳಪಗಳನ್ನು ಮುಚ್ಚಿಟ್ಟು ಬರೆಯುವುದನ್ನೇ ನಿಲ್ಲಿಸಬೇಕೆಂದಿದ್ದೇನೆ."

ನೀವು ನಿಲ್ಲಿಸಬಹುದು, ಆದರೆ ಹಲಗೆ ಬಳಪಗಳು ಯಾರ ಮಾತೂ ಕೇಳುವುದಿಲ್ಲ" ಎಂದು ದಾಸಿ ಹೋಗುತ್ತಿದ್ದಂತೆ ಅಗ್ಗಳನು ಅವಳನ್ನು ಹತ್ತಿರ ಕರೆದು "ನಿನ್ನ ಹೆಸರೇನು ಚೆಲುವೆ?" ಎಂದು ಕೇಳಿದನು.

"ವಸಂತ"

"ವಸಂತ ಗಂಡು ಹೆಸರಾಯಿತು."

"ಆದರೆ ನಾನು ಹದಿನಾರು ಕಲೆಯ ಹೆಣ್ಣು. ಒರೆ ಹಚ್ಚಿ ನೋಡಿದರೆ,