ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ ೩೭೧ ಲೋಕದಲ್ಲಿ ತಂದೆಗಿಂತ ತಾನು ದೊಡ್ಡವನಾಗಲು ಪ್ರಯತ್ನಿಸಿದ. ಅದಕ್ಕಾಗಿ ಅವನು ತನ್ನ ಸುತ್ತ ಚಲಿಸುವ ಉಪಗ್ರಹಗಳನ್ನು ಸೃಷ್ಟಿಸಿಕೊಂಡ. ಧರ್ಮ ವಿರುದ್ಧವಾದ ಈ ವರ್ತನೆಯನ್ನು ಇತರ ದೇವತೆಗಳು ಖಂಡಿಸಿದರು. ಶನಿಗೆ ಪಾಪಗ್ರಹವೆಂದು ಹೆಸರಾಯಿತು. ಇಂತಹ ಪಾಪಗ್ರಹವನ್ನು ದೇವತೆಯೆಂದು ಪೂಜಿಸುವ ಸಂಪ್ರದಾಯ ಜನರಲ್ಲಿ ಅಚರಣೆಗೆ ಬಂದದ್ದು ಹೇಗೆ? ಪಶ್ಚಿಮ ತೀರದ ನೌಕಾ ನಿಲ್ದಾಣಗಳಿಗೆ ಬರುತ್ತಿದ್ದ ಯವನ ವರ್ತಕರಿಂದ ಬಿಜ್ಜಳನು ಶನಿಗ್ರಹದ ವಿಚಾರವಾಗಿ ಇನ್ನೂ ಕೆಲವು ಸ್ವಾರಸ್ಯ ವಿವರಗಳನ್ನು ಕೇಳಿದ್ದನು. ಶನಿಯು ರೋಂ ದೇಶೀಯರ ಅಧಿದೇವತೆ. ಶನಿಯ ಆರಾಧನೆಗಾಗಿ ಅವರು ದೊಡ್ಡ ಮಹೋತ್ಸವ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ನೀತಿ ಧರ್ಮಗಳನ್ನು ಬಿಟ್ಟು ಸ್ಟೇಚ್ಛೆಯಿಂದ ನಡೆದುಕೊಳ್ಳುವುದು ಅವರ ಪದ್ಧತಿ. ಮುಂದೆ ಆ ರಾಜ್ಯದಲ್ಲಿ ಪ್ರಚಾರಕ್ಕೆ ಬಂದ ಈಸಾಯಿ ಧರ್ಮ, ಶನಿಗ್ರಹವನ್ನು ದೈವ ವಿರೋಧಿ ಸೈತಾನನೆಂದು ಕರೆಯಿತು. ರೋಂ ದೇಶದ ಚಕ್ರವರ್ತಿಗಳಲ್ಲಿ ಕುಖ್ಯಾತರಾದ ಟಿಬೂರಸ್, ಕ್ಯಾಲಿಗುಲ, ನೀರೋ ಮೊದಲಾದವರ ಅತಿಕಾಮಿ ಅಗಮ್ಯಾಗಮನದ ಕಥೆಗಳಂತೆ, ಈಸಾಯಿ ಧರ್ಮದ ವಿನಾಶಕ್ಕಾಗಿ ಅವರು ನಡೆಸಿದ ಅಮಾನುಷ ಹಿಂಸಾಕೃತ್ಯದ ಕಥೆಗಳೂ ಬಿಜ್ಜಳನಿಗೆ ಪರಿಚಿತವಾಗಿದ್ದವು. ಅವುಗಳ ನೆನಪಿನಿಂದ ಅವನ ಮುಖದಲ್ಲಿ ಕುಚೋದ್ಯದ ನಗೆ ಮೂಡಿತು. ಬಿಜ್ಜಳನು ತನಗೆ ತಾನೆ ಹೇಳಿಕೊಂಡನು : “ಸೂರ್ಯನನ್ನು ಶೈವರು ಭರ್ಗನೆಂದು, ವೈಷ್ಣವರು ನಾರಾಯಣನೆಂದು ಪೂಜೆಮಾಡಿದರೆ ಮಾಡಲಿ. ಶನಿಗ್ರಹವೊಂದೇ ನನ್ನ ಆರಾಧ್ಯ ದೇವತೆ. ಶನಿಯ ಅನುಗ್ರಹದಿಂದ ನನ್ನ ರಾಜ್ಯಾಪಹಾರ ರ್ಪೂಣ್ರವಾಗಿದೆ. ಈಗ ನನ್ನನ್ನು ವಿರೋಧಿಸುತ್ತಿರುವವರು ಶರಣರು ಮಾತ್ರ. ಶರಣರನ್ನು ನಾಶಮಾಡಲು ಶರಣಧರ್ಮವನ್ನು ನಿರ್ಮೂಲಗೊಳಿಸಲು, ಈಸಾಯಿ ಧರ್ಮದ ವಿನಾಶಕ್ಕಾಗಿ ರೋಂ ದೇಶದ ಅರಸರು ನಡೆಸಿದ ಹಿಂಸಾಕೃತ್ಯಗಳನ್ನು ನಾನು ಚಾಲುಕ್ಯರಾಜ್ಯದಲ್ಲಿ ನಡೆಸುತ್ತೇನೆ. ಇಂದು ಅದರ ನಾಂದಿ. ಕಲ್ಯಾಣದ ಶೈವಮಠಗಳ ದಹನದಿಂದ ಇಂದಿನ ಕಾಳರಾತ್ರಿ ಬೆಚ್ಚಿ ಎಚ್ಚರಗೊಳ್ಳುವುದು. ನೆಲಹತ್ತಿ ಉರಿದು ದಶದಿಕ್ಕುಗಳು ಆರಕ್ತವಾಗುವುವು. ಶನೈಶ್ಚರನಿಗೆ ಇದು ನನ್ನ ಪೂಜೆ.” ಭಾವಾವೇಶದಿಂದ ಬಿಜ್ಜಳನ ದೇಹ ಕಂಪಿಸಿತು. ಗಂಟಲು ಬಿಗಿದಂತಾಯಿತು. ಅವನು ಪ್ರತಿನಿತ್ಯ ಪಠಿಸುತ್ತಿದ್ದ ಸ್ತೋತ್ರದ ನುಡಿಗಳೂ ನೀರವವಾಗಿ ನುಡಿದವು: