ಈ ಪುಟವನ್ನು ಪ್ರಕಟಿಸಲಾಗಿದೆ

೩೯೦

ಕ್ರಾಂತಿ ಕಲ್ಯಾಣ

ಗರ್ವಿತೆಯಾಗಿದ್ದೆ, ಗಂಗ, ಅದನ್ನು ನೀನು ಕಳೆದೆ. ನಿನ್ನಲ್ಲಿ ಮುಚ್ಚುಮರೆಯೇಕೆ? ಅಂದು ನೀನು ಅವರ ಸಂಗಡ ಸಂಗಮಕ್ಕೆ ಹೋದಾಗ ನಾನು ವಾಸ್ತವದಲ್ಲಿ ಕರುಬಿದೆ. ನನಗಿಂತ ನೀನು ಪುಣ್ಯವತಿಯೆಂದು ಭಾವಿಸಿದೆ. ವಿರಹಜ್ವಾಲೆಯಲ್ಲಿ ಬೆಂದು ಸಾಯಲು ನಿರ್ಧರಿಸಿ, ಮೂರು ದಿನಗಳು ಉಪವಾಸ ಮಾಡಿದೆ. ನಾಗಲಾಂಬೆಯವರು ನನ್ನನ್ನು ಎಚ್ಚರಿಸಿದರು. 'ಹುತ್ತ ಬಡಿದರೆ ಹಾವು ಸಾಯುವುದೇ? ಈ ತನುವಿನ ತಪಸ್ಸಿನಿಂದ ಯಾವ ಫಲವೂ ಇಲ್ಲ,' ಎಂದು ಹೇಳಿ ಮನೋವೇದನೆಯನ್ನು ಸಮಚಿತ್ತ ಸಂಯಮಗಳಿಂದ ಶಾಂತಿಪಥದಲ್ಲಿ ನಡೆಸುವ ಸಂಜೀವನ ವಿದ್ಯೆಯನ್ನು ಕಲಿಸಿದರು. ಈಗ ನಾನು ಎಲ್ಲಿ ಹಂಬಲದಿಂದ ದೂರವಾಗಿದ್ದೇನೆ. ಇಪ್ಪೆಯ ಹೂವನ್ನು ಅನುಗೊಳಿಸಲು ಇಪ್ಪ ಹಿಪ್ಪೆಯಾದಂತೆ ಮನದ ವಾಸನೆಗಳಲ್ಲಿ ಒಂದೊಂದಾಗಿ ಅಳಿಯುತ್ತಿವೆ. ಈಗ ನಾನು ಸಂಗಮಕ್ಕೆ ಹೋಗಿ ಆ ವಾಸನೆಗಳನ್ನು ಪುನಃ ಎಚ್ಚರಿಸಲೇಕೆ? ಭಾವಶೂನ್ಯತೆಯಲ್ಲಿ ನಿಮಗ್ನವಾದ ಮನಸ್ಸನ್ನು ವೇದನೆಯ ತಿರುಗಣೆ ಚಕ್ರದಲ್ಲಿ ಮತ್ತೆ ತೊಡಗಿಸಲೇಕೆ? ಅವರ ಆಹ್ವಾನಕ್ಕೆ ನಾನು ಕಳುಹಿಸಬಹುದಾದ ಉತ್ತರವೊಂದೇ.....


“ನಾನಾರ ಸಾರುವೆನೆಂದು ಚಿಂತಿಸಲೇತಕಯ್ಯ?
ನಾನಾರ ಹೊಂದುವೆನೆಂದು ಭ್ರಮೆ ಪಡಲೇತಕಯ್ಯ?
ನಾನಾರ ಇರುವನರಿವೆನೆಂದು ಪ್ರಲಾಪಿಸಲೇತಕಯ್ಯ?
ಪರಿಣಾಮಮೂರ್ತಿ ಬಸವನ ರೂಪು ಕರಸ್ಥಳದಲ್ಲಿ
ಬೆಳಗಿದ ಬಳಿಕ, ಸಂಗಯ್ಯನ ಹಂಗು ನಮಗೇತಕಯ್ಯ ?”

ನೀಲಲೋಚನೆಯ ಭಾವಾವೇಶವನ್ನು ಕಂಡು ಗಂಗಾಂಬಿಕೆ ವಿಸ್ಮಿತೆಯಾದಳು. ಗೆಳತಿಯ ಮೈದಡವಿ ಅವಳು, “ಈ ನೂರೆಂಟು ದಿನಗಳ ವಿಯೋಗ ಜ್ವಾಲೆಯಿಂದ ನೀನು ಪುಟವಿಟ್ಟ ಚಿನ್ನದಂತಾಗಿರುವೆ, ನೀಲಾ. ನಿನ್ನ ವಾದಕ್ಕೆ ಉತ್ತರ ಕೊಡುವ ಸಾಮರ್ಥ್ಯ ನನಗಿಲ್ಲ. ನಿನ್ನ ಇಷ್ಟವಿದ್ದಂತೆ ಮಾಡು,” ಎಂದಳು.

ಅಂದು ಆ ವಿಚಾರ ಅಷ್ಟಕ್ಕೆ ಮುಗಿಯಿತು. ಆದರೆ ನೀಲಲೋಚನೆ ಮಾತ್ರ ಚಿಂತಿಸುತ್ತ ಬಹಳ ಹೊತ್ತು ನಿದ್ರೆಯಿಲ್ಲದೆ ಮಲಗಿದ್ದಳು-"ನಾಳೆ ಶರಣರ ವಲಸೆ ಪ್ರಾರಂಭವಾಗುವುದು. ಗುರುಕುಲದ ರಕ್ಷಕ ಭಟರೊಡನೆ ಅಪ್ಪಣ್ಣ ಸಂಗಮಕ್ಕೆ ಹಿಂದಿರುಗುವನು. ಅವನ ಸಂಗಡ ಕಳುಹಿಸುವ ಉತ್ತರವೇನು?” ಎಂದು

ಬಹಳ ಹೊತ್ತಿನ ಮೇಲೆ ಅವಳಿಗೊಂದು ವಚನ ಹೊಳೆಯಿತು. ಎದ್ದು ಕುಳಿತು, ದೀಪ ಹಚ್ಚಿ ಲೇಖನೋಪಕರಣಗಳನ್ನು ತೆಗೆದುಕೊಂಡು ಬರೆದಿಟ್ಟಳು. ವಚನ ಈ ರೀತಿಯಿತ್ತು :