ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪00 ಕ್ರಾಂತಿ ಕಲ್ಯಾಣ ಅಸಮಾಧಾನದ ಬಿರುದನಿಯಿಂದ ಮಾಚಿದೇವರು ಹೇಳಿದರು : “ನಿಮ್ಮ ಈ ಅಸ್ಥಿರ ಮನೋವೃತ್ತಿ ನನ್ನನ್ನು ಬೇಸರಗೊಳಿಸುತ್ತಿದೆ, ಚೆನ್ನಬಸವಣ್ಣನವರೆ. ಕಲ ಚೂರ್ಯ ಅರಮನೆಯ ದುರ್ಘಟನೆ ಏನೇ ಇರಲಿ, ಅದರಿಂದ ನಮಗೆ ಸಹಾಯವಾಗುವುದಿಲ್ಲ. ನಮಗೆ ತಿಳಿಯದ ಯಾವುದೋ ಕಾರಣದಿಂದ ಸದ್ಯದಲ್ಲಿ ಸ್ತಂಭಿತವಾಗಿರುವ ಮಾಧವ ನಾಯಕನ ಸೈನ್ಯ ನಾಳೆ ಎಚ್ಚೆತ್ತು ಶೈವಮಠಗಳನ್ನು ನಾಶಮಾಡುವ ಆಜ್ಞೆ ಕಾರ್ಯಗತವಾಗಬಹುದು. ಶಿವನ ಕರುಣೆಯಿಂದ ನಮಗೆ ದೊರಕಿರುವ ಈ ಸದವಕಾಶವನ್ನು ಉಪಯೋಗಿಸಿಕೊಳ್ಳಲು ನಾವು ಅಸಮರ್ಥರಾದರೆ ಕಲ್ಯಾಣದ ಮೃತ್ಯುಪಂಜರದಿಂದ ಪಾರಾಗುವ ಆಸೆಯನ್ನೇ ಕೈಬಿಡಬೇಕಾಗುವುದು. ಅಲ್ಲದೆ....” ಎಂದು ಮಾಚಿದೇವರು ಸಕಲೇಶ ಮಾದರಸರ ಮುಖ ನೋಡಿದರು. “ನೀವು ಹೇಳುವುದನ್ನೆಲ್ಲ ಹೇಳಿ ಮುಗಿಸಿ ಮಾಚಿದೇವಯ್ಯನವರೇ, ಕೊನೆಯಲ್ಲಿ ನನ್ನ ನಿರ್ಧಾರ ತಿಳಿಸುತ್ತೇನೆ,” ಎಂದರು ಸಕಲೇಶ ಮಾದರಸರು. * ಮಾಚಿದೇವರು ಮುಂದುವರಿಸಿ ಹೇಳಿದರು : “ಶರಣರನ್ನು ಉಳಿವೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗುವೆನೆಂಬ ನನ್ನ ಶಪಥವನ್ನು ನೀವು ಕೇಳಿದ್ದೀರಿ. ಆದರೆ ಶರಣರು ಕಲ್ಯಾಣದಲ್ಲಿರುವವರೆಗೆ ನಾನು ನಿರುಪಾಯನು. ನನ್ನ ಈ ಎರಡು ತೋಳುಗಳಿಂದ ನಿಮ್ಮನ್ನು ರಕ್ಷಿಸುವುದು ಸಾಧ್ಯವಲ್ಲ. ನೀವು ಕಲ್ಯಾಣವನ್ನು ಬಿಟ್ಟು ಹೊರಗೆ ಬಂದು ಆಂಜನೇಯ ಹೊಳೆಯನ್ನು ದಾಟಿದರೆ ನನ್ನ ಗಣಾಚಾರದ ಐದು ಸಹಸ್ರ ವೀರಯೋಧರು ನಿಮ್ಮ ಸಹಾಯಕ್ಕೆ ನಿಲ್ಲುವರು. “ಅವರು ನಿಮ್ಮನ್ನು ಸುರಕ್ಷಿತವಾಗಿ ಉಳಿವೆಗೆ ಕರೆದೊಯ್ಯಲು ಸಮರ್ಥರು.” ಚೆನ್ನಬಸವಣ್ಣನವರು ಮೌನ. ಸಕಲೇಶ ಮಾದರಸರು ಹೇಳಿದರು : “ಮಾಚಿದೇವರ ಸಲಹೆ ಯುಕ್ತಿ ಯುಕ್ತವಾಗಿದೆ. ನಾವು ಮೊದಲೆ ಗೊತ್ತು ಮಾಡಿಕೊಂಡಿದ್ದಂತೆ ಮಧ್ಯರಾತ್ರಿಗೆ ಮಹಮನೆಯನ್ನು ಬಿಡುವುದು ಸರಿಯಾದ ಮಾರ್ಗ,* ಚೆನ್ನಬಸವಣ್ಣನವರು ಒಪ್ಪಿ ಸಭೆ ಮುಗಿಸಲು ಸೂಚನೆ ಕೊಟ್ಟರು. ವಲಸೆಗಾಗಿ ಪಾತ್ರೆ ಪದಾರ್ಥ ಪರಿಕರಗಳನ್ನು ತುಂಬಿದ ಗಾಡಿಗಳು ಸಿದ್ಧವಾಗಿ ನಿಂತಿದ್ದವು. ಅರ್ಧಘಳಿಗೆಯ ಅನಂತರ ಶರಣರೆಲ್ಲ ಮೌನವಾಗಿ ಮಹಮನೆಯನ್ನು ಬಿಟ್ಟರು,ಮುಕ್ತಜೀವಿಯ ಆತ್ಮಚೈತನ್ಯ ಉತ್ಕಮಣ ಕಾಲದಲ್ಲಿ ನಿರ್ಲಿಪ್ತಭಾವದಿಂದ ದೇಹವನ್ನು ಬಿಡುವಂತೆ, ನಿರ್ಜಿವ ದೇಹ ಕೊನೆಯುಸುರಿಂದ ಕೊನೆಯ ಸಾರಿ ಚಲಿಸುವಂತೆ, ತೆರೆದು ಬಿಟ್ಟ ಮಹಮನೆಯ ಕಿಟಕಿ ಬಾಗಿಲುಗಳು ಮಧ್ಯರಾತ್ರಿಯ ಸುಳಿಗಾಳಿಯಿಂದ ಚಲಿಸಿ ಹಚ್ಚಿಟ್ಟ ದೀಪಗಳು ಆರಿದವು. ಡಿ ಟ