ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೩೧

ಕರ್ಣದೇವನು ಮೆಚ್ಚಿ ತಲೆದೂಗಿ, "ಸಂಗೀತಗಾರನಷ್ಟೇ ಅಲ್ಲ, ಚತುರ ಕವಿ," ಎಂದನು. ಸ್ತುತಿಯ ನೆವದಲ್ಲಿ "ಚಲುಕ್ಯಕರ್ಣಾಭರಣ" ಎಂದು ಅಗ್ಗಳನು ತನ್ನನ್ನು ಹೊಗಳಿದನೆಂದು ಭಾವಿಸಿ ಅವನು ಮನದಲ್ಲಿ ಹಿಗ್ಗಿದನು.

ಸಂದರ್ಶನ ಅನಿರೀಕ್ಷಿತವಾದ ಬೇರೆ ದಾರಿ ಹಿಡಿಯಿತೆಂದು ಕ್ರಮಿತನಿಗೆ ಸ್ವಲ್ಪ ಅಸಮಾಧಾನವಾದರೂ ಅಗ್ಗಳನಿಗೆ ದೊರೆತ ವಿಜಯಕ್ಕಾಗಿ ಆನಂದಿಸಿದನು. ಕವಿಗಾಯಕ ಪುರೋಹಿತ ಪೌರಾಣಿಕರು ಕರುಬಿದರು. ಒತ್ತೆಕೊಟ್ಟ ವೃದ್ಧನು ತಟ್ಟನೆ ತರುಣನಾದಂತೆ ಹೆಗ್ಗಡತಿಯರು ತಳುಕಿ ಬಳುಕಿ, ಸುಯ್ದು ಬಯ್ದು ತಳವೆಳಗಾದರು. ಈ ಬಗೆಯ ಯಾವ ಪ್ರಕೋಪಕ್ಕೂ ಸಿಕ್ಕದೆ ಶಾಂತವಾಗಿದ್ದವರೆಂದರೆ ಪಸಾಯಿತರು ಮತ್ತು ಭಟರು. ಪ್ರಭುಮನ್ನೆಯರ ವಿಲಾಸ ಜೀವನದ ಏಳು ಬೀಳು ಪರಿಹಾಸ ಸಂತೋಷಗಳು ಆ ಕಷ್ಟಜೀವಿ ಕರ್ಮಚಾರಿಗಳಿಗೆ ಸಂಪೂರ್ಣ ಅಪರಿಚಿತವಾಗಿತ್ತು.

ಅಗ್ಗಳನ ಕಾವ್ಯಪಠನದಿಂದ ಸಭೆಯನ್ನು ಮಸಗಿದ್ದ ಕತ್ತಲ ತೆರೆ ಕಳಚಿ ಬಿದ್ದಂತಾಯಿತು. ಕರ್ಣದೇವನು ಅವಸರದಿಂದ ಅಗ್ಗಳನ ಬಳಿಗೆ ಬಂದು, "ಬಹಳ ಚೆನ್ನಾಗಿ ಹಾಡಿದೆ, ಅಗ್ಗಳದೇವ," ಎಂದು ಅಭಿನಂದಿಸಿ, ಜಗದೇಕಮಲ್ಲನ ಕೈಯಿಂದ ಜೋಡೀಹಾರ ಶಾಲುಜೋಡಿಗಳ ಉಪಹಾರ ಕೊಡಿಸಿದನು. ಹೆಗ್ಗಡತಿಯರು ಹೂವು ಗಂಧೋದಕಗಳನ್ನು ಅಗ್ಗಳನ ಮೇಲೆರಚಿದರು. ಕಡೆನೋಟ ಮುಗುಳುನಗೆ ಸುಳಿವು ಸನ್ನೆಗಳ ಹಾರಾಟ ಕೆಲವು ಕ್ಷಣಗಳು ಬಿಡುವಿಲ್ಲದೆ ನಡೆಯಿತು. ಉಪಹಾಸಕ್ಕಾಗಿ ಪ್ರಾರಂಭವಾದ ಜಗದೇಕಮಲ್ಲನ ರಾಜಸಭೆ ಅಗ್ಗಳನ ವಿಜಯ ಸಭೆಯಾಗಿ ಮುಗಿಯಿತು.

ಮರುದಿನ ಸಂಜೆ ಜಗದೇಕಮಲ್ಲನ ವಾಸಗೃಹದ ಏಕಾಂತದಲ್ಲಿ ಸಭೆ ನಡೆದಾಗ ಕರ್ಣದೇವನು ಸಲಿಗೆಯಿಂದ ಜಗದೇಕಮಲ್ಲನ ಬೆನ್ನು ತಟ್ಟಿ "ನೋಡಿದೆಯ, ಭಂಡರಾಜ? ನಿನ್ನ ಕಾವ್ಯೋಪದೇಶಿ ಎಂತಹ ರಸಿಕನೆಂಬುದನ್ನು," ಎಂದು ನಗೆ ಮಾಡಿದನು.

ಈ ಏಕಾಂತ ಸಭೆಗಳಲ್ಲಿ ಕರ್ಣದೇವನ ದರ್ಪ ಧೂರ್ತತೆಗಳು ಮಿತಿಮೀರಿ ಜಗದೇಕಮಲ್ಲನು ಅವನ ವಿನೋದ ಉಪಹಾಸಗಳ ಆಟಿಕೆಯಾಗುತ್ತಿದ್ದನು. ಈ ಸಂದರ್ಭಗಳಲ್ಲಿ ಅವನು ಜಗದೇಕಮಲ್ಲನನ್ನು "ಭಂಡರಾಜ" ಎಂದು ಕರೆಯುವುದು ಅಭ್ಯಾಸವಾಗಿತ್ತು. ಈ ಸಭೆಗಳಲ್ಲಿ ಮನೆ ಹೆಗ್ಗಡೆಯ ಕೆಲಸವೆಂದರೆ ಸದಸ್ಯರು ಅಪೇಕ್ಷಿಸುವ ಪಾನಕ ಪಣ್ಯಾರಗಳನ್ನು ಒದಗಿಸುವುದು. ಅಂದಿನ ದಿನ ಕರ್ಣದೇವನ ಕಣ್ಣು ಬಿದ್ದ ಹೆಗ್ಗಡತಿಯರೂ "ಪಣ್ಯಾರ"ದಲ್ಲಿ ಸೇರುತ್ತಿದ್ದರು.