ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬೦ ಕ್ರಾಂತಿ ಕಲ್ಯಾಣ ಅಲ್ಲಿ ಅವರಿಗೆ ಬೇರೊಂದು ಮೃತ್ಯು ಕಾದಿತ್ತು. ಕುದುರೆಗಳ ಹಿಂದೆ ರಥಗಳ ಮೇಲೆ ಬಂದ ಬಿಲ್ಲುಗಾರರು ಎದುರಿಗೆ ಓಡಿ ಬರುತ್ತಿರುವವರು ಶರಣರೆಂದು ಭಾವಿಸಿ ತಡೆಗಟ್ಟಿ ಕೊಂದರು. ತಮಗಾದ ಸೋಲನ್ನು ಮಾಧವ ನಾಯಕನಿಗೆ ವರದಿ ಮಾಡಲು ಒಬ್ಬ ರಾಹುತನೂ ಉಳಿಯಲಿಲ್ಲ. ರಾಹುತರಿಗಾದ ಗತಿಯೇ ರಥಗಳಿಗೂ ಕಾದಿತ್ತು, ಆ ವಿಧ್ವಂಸಕ ಬಯಲಿನಲ್ಲಿ. ಉರಿಯುತ್ತಿದ್ದ ಶಿಬಿರದ ಹತ್ತಿರ ಬಂದ ಕೂಡಲೆ ಕುದುರೆಗಳು ಬೆದರಿ ನಿಂತವು. ಆಯಕಟ್ಟಿನ ಸ್ಥಳಗಳಲ್ಲಿ ಅವಿತು ನಿಂತಿದ್ದ ಗಣಾಚಾರಿ ಯೋಧರು ಬಾಣಗಳ ಸುರಿ ಮಳೆಗರೆದರು. ಬಾಣ ಯಾವ ಕಡೆಯಿಂದ ಬರುತ್ತಿದೆಯೆಂಬುದನ್ನು ತಿಳಿಯಲೂ ರಥಿಕರು ಶಕ್ತರಾಗಲಿಲ್ಲ. ಅವರಲ್ಲನೇಕರು ರಥಗಳಲ್ಲಿ ಇದ್ದಂತೆಯೆ ಪ್ರಾಣಬಿಟ್ಟರು. ಇನ್ನು ಕೆಲವರು ಬೆಂಕಿಗೆ ಸಿಕ್ಕು ಸತ್ತರು. ಕೆಲವು ರಥಗಳು ನದಿಗೆ ಬಿದ್ದು ಪ್ರವಾಹದಲ್ಲಿ ತೇಲಿಹೋದವು. ಅನೇಕ ಕುದುರೆಗಳೂ ಆಯುಧೋಪಕರಣಗಳೂ ಗಣಾಚಾರಿ ಯೋಧರ ವಶವಾದವು. ಕಣಿವೆಯ ಮುಖದಲ್ಲಿದ್ದ ಮಾಧವ ನಾಯಕನಿಗೆ ಮಧ್ಯರಾತ್ರಿಯ ಹೊತ್ತಿಗೆ ಪರಾಭವದ ಸುದ್ದಿ ಮುಟ್ಟಿತು. ತಡಸದ ಹಾಯ್ದಡದಿಂದ ಶರಣರು ಸಂಜೆಗೆ ಮೊದಲೇ ನದಿ ದಾಟಿದರೆಂದು ತಿಳಿಯಿತು. ಕೋಪ-ಉದ್ರೇಕಗಳಿಂದ ತಳಮಳಿಸುತ್ತ ಅವನು, ಸೈನ್ಯಮಧ್ಯದ ತನ್ನ ಗೂಡಾರದಲ್ಲಿ ಸೂರ್ಯೋದಯಕ್ಕಾಗಿ ಕಾಯುತ್ತ ನಿದ್ರೆಯಿಲ್ಲದೆ ರಾತ್ರಿಯನ್ನು ಕಳೆದನು. ಶಿಬಿರದ ಪಾರ್ಶ್ವದಲ್ಲಿದ್ದ ಸಣ್ಣಗುಡ್ಡದ ಮೇಲೆ ನಿಂತು ಈ ವಿಸ್ಮಯಕರ ಯುದ್ಧವನ್ನು ವೀಕ್ಷಿಸಿದ ಚೆನ್ನಬಸವಣ್ಣ ಮಾಚಿದೇವರು ಇದೇ ಬಗೆಯ ಇನ್ನೊಂದು ಸಂದಿಗ್ಧದಲ್ಲಿ ಬಿದ್ದಿದ್ದರು. ಸದ್ಯದಲ್ಲಿ ಗಣಾಚಾರಿ ಯೋಧರಿಗೆ ಜಯವಾಗಿದ್ದರೂ ಶರಣರು ವಿಪತ್ತಿನಿಂದ ಪಾರಾಗಿಲ್ಲವೆಂದು ಅವರಿಗೆ ತಿಳಿದಿತ್ತು. ನದಿ ದಾಟಿದ ಯಾತ್ರಾದಳ ಮುಂದೆ ಉಳಿವೆಯನ್ನು ಸೇರುವುದು ಹೇಗೆ ? ಎಂದು ಅವರು ಯೋಚಿಸುತ್ತಿದ್ದರು. ಗಣಾಚಾರಿ ಯೋಧ ದಳಗಳ ನಾಯಕನು ಆಗ ಅಲ್ಲಿಗೆ ಬಂದು, “ತಡಸದ ಹಾಯ್ಡ ಶತೃಗಳ ವಶವಾಯಿತು. ಒಂದು ತೆಪ್ಪ ಮತ್ತು ಕೆಲವು ದೋಣಿಗಳನ್ನು ಅವರು ಹಿಡಿದಿದ್ದಾರೆ,” ಎಂದು ಹೇಳಿದನು. “ಹಾಗಾದರೆ ಸೈನಿಕ ಪಡೆಗಳು ನದಿಯನ್ನು ದಾಟಿ ಯಾತ್ರಾದಳದ ಮೇಲೆ ಬೀಳಬಹುದಲ್ಲವೆ?” -ಚೆನ್ನಬಸವಣ್ಣನವರು ಕಾತರಗೊಂಡು ನುಡಿದರು.