ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೬೫ ಗಾಯಗೊಂಡು ನರಳುತ್ತ ಡೋಲಿಯಲ್ಲಿ ಬಿದ್ದಿದ್ದ ಮಾಧವ ನಾಯಕನಿಗೆ ಹೊಸ ಆಕ್ರಮಣದ ವಾರ್ತೆ ವರದಿಯಾದಾಗ ಸೈನ್ಯ ಕಲ್ಯಾಣಕ್ಕೆ ಹಿಂದಿರುಗುವಂತೆ ಆಜ್ಞೆ ಮಾಡಿದನು. ಪೂರ್ವಾಹ್ನ ಮೊದಲನೆಯ ಪ್ರಹರ ಮುಗಿಯುವಷ್ಟರಲ್ಲಿ ಕಣಿವೆಯಾಚಿನ ಸೈನ್ಯ ಶಿಬಿರ ಜನಶೂನ್ಯವಾಯಿತು. ಸೈನಿಕರು ಬಿಟ್ಟು ಹೋದ ಗೂಡಾರಗಳು, ಚಕ್ಕಡಿಗಳು, ಸಾಮಾನು ಸರಂಜಾಮುಗಳು, ಎತ್ತುಗಳು, ಕುದುರೆಗಳು ಗಣಾಚಾರಿ ಯೋಧರ ವಶವಾದವು. ಕಾಳಗ ಮುಗಿದ ಮೇಲೆ ಅಗ್ಗಳನೂ, ಜಂಗಮ ತಂಡದ ನಾಯಕನೂ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಾಚಿದೇವ, ಚೆನ್ನಬಸವಣ್ಣನವರನ್ನು ನೋಡಿದರು. “ಕಲಿದೇವರ ದೇವನ ಸಹಾಯಕ್ಕಾಗಿ ಕೂಡಲ ಸಂಗಮ ದೇವನು ನಿಮ್ಮಲ್ಲಿಗೆ ಕಳುಹಿಸಿದನು, ಅಗ್ಗಳ, ನೀವು ಸಮಯಕ್ಕೆ ಸರಿಯಗಿ ಬಂದಿದ್ದರಿಂದ ನಾವು ಉಳಿದು ಕೊಂಡೆವು,” ಎಂದು ಅವರು ಅಗ್ಗಳನನ್ನೂ, ಜಂಗಮ ತಂಡದ ನಾಯಕನನ್ನೂ ಅಭಿನಂದಿಸಿ ವಂದನೆ ಸಲ್ಲಿಸಿದರು. ಸುತ್ತಲ ಪ್ರದೇಶದಲ್ಲಿ ಸಾಂಕ್ರಾಮಿಕ ಹರಡದಿರಲೆಂದು ಗಣಾಚಾರಿ ಯೋಧರು ಯುದ್ಧದಲ್ಲಿ ಮಡಿದವರೆಲ್ಲರ ಅಂತ್ಯ ಸಂಸ್ಕಾರ ನಡೆಸಿದರು. ಸಂಜೆಯ ಹೊತ್ತಿಗೆ ಈ ಕಾರ್ಯ ಮುಗಿಯಿತು. ಕೃಷ್ಣಂ ಎರಡು ತಂಡಗಳಲ್ಲಿದ್ದ ತೆಪ್ಪಗಳೂ ದೋಣಿಗಳೂ ತಂಗಡಿಯ ಹಾಯ್ದಡಕ್ಕೆ ಬಂದವು. ಹಠಾತ್ತಾಗಿ ಹೆಚ್ಚಿದ್ದ ಪ್ರವಾಹ ಪುನಃ ಇಳಿಮುಖವಾಯಿತು. ಆ ರಾತ್ರಿಯೇ ಗಣಾಚಾರಿ ಯೋಧದಳಗಳೂ, ಅವರ ಸಂಗಡಿದ್ದ ಮಾಚಿದೇವ, ಚೆನ್ನಬಸವಣ್ಣ ಕೂಗಿನ ಮಾರಿತಂದೆ, ಶೂಲದ ಬೊಮ್ಮಯ್ಯ ಇವರೇ ಮುಂತಾದ ಶರಣರೂ, ಉತ್ತರಾಪಥದ ಜಂಗಮರೂ ನದಿಯನ್ನು ದಾಟಿ ಆಚಿನ ದಡದಲ್ಲಿದ್ದ ಶರಣರ ಯಾತ್ರಾದಳವನ್ನು ಸೇರಿದರು. ಆಮೇಲಿನ ಕೆಲವು ದಿನಗಳಲ್ಲಿ ಯಾವ ದುರ್ಘಟನೆಯೂ ಇಲ್ಲದೆ ಶರಣರು ಮಲಪ್ರಭಾ ಘಟಪ್ರಭಾ ನದಿಗಳನ್ನು ದಾಟಿದರು. ಅಲ್ಲಿಂದ ಉಳಿವೆಯ ಮಾರ್ಗ ನಿರಾಪದವೆಂದು ತಿಳಿದಿದ್ದ ಮಾಚಿದೇವರು ಕುರುಗೋಡಿನ ಜಲಾಶಯದಲ್ಲಿ ಅಸ್ತ್ರಗಳನ್ನು ತೊಳೆದು ಗಣಾಚಾರಿ ಯೋಧರಿಗೊಪ್ಪಿಸಿ, ಶರಣರಿಂದ ಬೀಳ್ಕೊಂಡು ತಮ್ಮ ಸ್ವಸ್ಥಾನವಾದ ಹಿಪ್ಪರಗಿಗೆ ಹಿಂದಿರುಗಿ ಲಿಂಗೈಕ್ಯರಾದರು. “ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು, ನೋಡಾ ! ಒಬ್ಬ ಜಂಗಮನ ಅಭಿಮಾನದಿಂದ ಚಾಲುಕ್ಯ ರಾಯನ ಆಳ್ವಿಕೆ ತೆಗೆಯಿತ್ತು”