ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೬೭ ಪಡೆದು ಪಟ್ಟಣಸ್ವಾಮಿ ಹೇಳಿದನು : “ಸರ್ವಾಧಿಕಾರಿ ಬಿಜ್ಜಳರಾಯರ ಅಂತ್ಯಸಂಸ್ಕಾರ ನಡೆದ ದಿನ ರುದ್ರಭೂಮಿಯಿಂದ ಹಿಂದಿರುಗಿದ ಮೇಲೆ ಸರ್ವಾಧಿಕಾರದ ವಿಚಾರದಲ್ಲಿ ಕರ್ಣದೇವರಸರಿಗೂ ಮಾಧವ ನಾಯಕರಿಗೂ ವಿವಾದ ಮೊದಲಾಯಿತು. ಮರುದಿನ ಪ್ರಾತಃಕಾಲ ಕರ್ಣದೇವರಸರು ತಾವೇ ಚಾಲುಕ್ಯ ಸರ್ವಾಧಿಕಾರಿಗಳೆಂದು ನಗರದಲ್ಲಿ ಘೋಷಣೆ ಹೊರಡಿಸಿದರು. ಮಾಧವ ನಾಯಕರು ಅದನ್ನು ವಿರೋಧಿಸಿ, ಕರ್ಣದೇವರಸರಿದ್ದ ರಾಜಗೃಹದ ಮೇಲೆ ದಾಳಿಗೆ ಪ್ರಾರಂಭಿಸಿದರು. ಎರಡು ಕಡೆಯ ಸೈನಿಕರಿಗೆ ಆ ದಿನವೆಲ್ಲ ಹೋರಾಟ ನಡೆಯಿತು. ಕರ್ಣದೇವರಸರು ಮಡಿದರು. ಅವರ ಕಡೆಯ ಸೈನಿಕರು ಮಾಧವ ನಾಯಕರಿಗೆ ಶರಣಾಗತರಾದರು. ಆ ರಾತ್ರಿಯೇ ಯಾವ ವೈಭವವೂ ಇಲ್ಲದೆ ಕರ್ಣದೇವರಸರ ಅಂತ್ಯಸಂಸ್ಕಾರ ನಡೆಯಿತು. ಮಾಧವ ನಾಯಕರು ರಾಜಗೃಹವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಈ ಹೋರಾಟದಲ್ಲಿ ನಗರ ರಕ್ಷಕ ದಳ ಯಾವ ಕಡೆಗೂ ಸೇರದೆ ತಟಸ್ಥವಾಗಿತ್ತು. ಇದನ್ನು ತಮ್ಮ ಮೇಲಿನ ವಿರೋಧ ಪ್ರದರ್ಶನವೆಂದು ತಿಳಿದು ಮಾಧವ ನಾಯಕರು, ಶಸ್ತ್ರಗಳನ್ನು ತ್ಯಜಿಸಿ ಶರಣಾಗತರಾಗುವಂತೆ ರಕ್ಷಕದಳಕ್ಕೆ ಕರೆಯಿತ್ತರು. ದಳದಲ್ಲಿ ಕೆಲವರು ಶರಣಾಗತರಾಗಿ ಜೀವ ಉಳಿಸಿಕೊಂಡರು. ಕೆಲವರು ಆಯುಧಗಳೊಡನೆ ನಗರವನ್ನು ಬಿಟ್ಟೋಡಿದರು. ವಿರೋಧಿಸಿದವರನ್ನು ಮಾಧವ ನಾಯಕರು ಸೆರೆಹಿಡಿದರು. ಮುಖಂಡರನ್ನು ಶೂಲಕ್ಕೇರಿಸಿದರು. ಆಮೇಲೆ ಮಾಧವ ನಾಯಕರು ನಗರದ ಮಹಾದ್ವಾರಗಳನ್ನು ಮುಚ್ಚಿಸಿ, ತಮ್ಮ ಸೈನಿಕರನ್ನು ಕಾವಲಿಟ್ಟರು. ನಗರದ ಎಲ್ಲ ಕಡೆ ಏಕಕಾಲದಲ್ಲಿ ಸೈನಿಕರ ವಿನಾಶ ಕಾರ್ಯ ಪ್ರಾರಂಭವಯಿತು. ಪ್ರಭುಗಳು ನಗರಾಧಿಕಾರಿಯನ್ನು ವಿಚಾರಿಸಿ, ಆ ವಿನಾಶ ಕೃತ್ಯದ ವಿವರಗಳನ್ನು ತಿಳಿದುಕೊಳ್ಳಬೇಕಾಗಿ ಬೇಡುತ್ತೇನೆ.” -ಎಂದು ಪಟ್ಟಣಸ್ವಾಮಿ ಮುಗಿಸಿದನು. ಸೋಮೇಶ್ವರನು ಅಪೇಕ್ಷಿಸಿದ ವಿವರಗಳನ್ನೀಯಲು ನಗರಾಧಿಕಾರಿಯಾಗಲಿ ನಾಗರಿಕರಾಗಲಿ ಸಮರ್ಥರಾಗಲಿಲ್ಲ. ಕೊನೆಗೆ ಇತರರಿಗಿಂತ ಹೆಚ್ಚು ಧೈರ್ಯಶಾಲಿಯೂ ಮಾತುಗಾರನೂ ಆದ ಹರದನೊಬ್ಬನು ಮುಂದೆ ಬಂದು ಹೇಳಿದನು : “ಕರ್ಣದೇವರಸರು ಹತರಾಗಿ ನಗರ ತಮ್ಮ ವಶವಾದ ಮೇಲೆ ಮಾಧವ ನಾಯಕರು ನಗರದ ಎಲ್ಲ ಶೈವಮಠಗಳನ್ನೂ ನಾಶಮಾಡುವಂತೆ ಸೈನಿಕರಿಗೆ ಆಜ್ಞೆ ಮಾಡಿದರು. ನಗರದ ಎಲ್ಲ ಕಡೆ ಏಕಕಾಲದಲ್ಲಿ ಪ್ರಾರಂಭವಾಯಿತು ಆ ವಿನಾಶಕಾರ್ಯ. ಅನೇಕ ಮಠ ಮಂದಿರಗಳನ್ನು ಸೈನಿಕರು ನಾಶಮಾಡಿದರು, ಹತ್ತಿರಿದ್ದ ನಾಗರಿಕರ