ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೬೯ ಸೈನಿಕರು. ಅನುಭವ ಮಂಟಪದ ಶಿಲಾ ಸ್ತಂಭಗಳು ಮಾತ್ರ ಈಗ ನಿಂತಿವೆ ಅಲ್ಲಿ. ಚೆನ್ನಬಸವಣ್ಣನವರ ಮುನ್ನೆಚ್ಚರಿಕೆಯಿಂದ ಶೂನ್ಯ ಸಿಂಹಾಸನ ಉಳಿಯಿತು. ಅವರು ಅದನ್ನು ಬಿಚ್ಚಿಸಿ, ಬಿಡಿಭಾಗಗಳನ್ನು ಪ್ರತ್ಯೇಕವಾಗಿ ವಾರಗಳ ಹಿಂದೆಯೇ ಉಳಿವೆಗೆ ಕಳುಹಿಸಿದ್ದರು. “ಈ ವಿನಾಶ ಕೃತ್ಯವನ್ನು ಮುಗಿಸಿ ಮಾಧವ ನಾಯಕರ ಸೈನಿಕರು ನಗರದಲ್ಲಿ ಇನ್ನೂ ಉಳಿದಿದ್ದ ಶರಣರನ್ನು ಹೆಂಗಸರು ಮಕ್ಕಳು ಬಾಲಕರು ವೃದ್ಧರು ಎಂಬ ಕರುಣೆಯೂ ಇಲ್ಲದೆ, ಸಾಮೂಹಿಕವಾಗಿ ವಧೆ ಮಾಡಿದರು. ಕಲ್ಯಾಣದ ಬೀದಿಗಳಲ್ಲಿ ರಕ್ತದ ಕೋಡಿ ಹರಿಯಿತು. ಆಮೇಲೆ, ಸೈನಿಕರ ದೃಷ್ಟಿ ನಾಗರಿಕರ ಮೇಲೆ ಬಿದ್ದಿತು. ಶರಣಧರ್ಮದ ಪ್ರೋತ್ಸಾಹಕರೆಂದು, ಶರಣರ ಮಿತ್ರರೆಂದು, ಶರಣರೊಡನೆ ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದರೆಂದು ಸೈನಿಕರು ಅನೇಕರನ್ನು ಕೊಂದರು. ಶ್ರೀಮಂತರ ಮನೆ ಮಠಗಳನ್ನು ಸೂರೆ ಮಾಡಿದರು. “ಇಷ್ಟೆಲ್ಲಾ ಮುಗಿದ ಮೇಲೆ, ನಗರದ ಹೊರಗಿನ ತಮ್ಮ ಶಿಬಿರಗಳಿಗೆ ಹಿಂದಿರುಗಿದರು. ಮರುದಿನ ಅವರು ಶಿಬಿರವೆ ವಲಸೆ ಹೋದ ಶರಣರನ್ನು ನಾಶಮಾಡಲು ಸೈನ್ಯದೊಡನೆ ದಕ್ಷಿಣಕ್ಕೆ ಹೋದಾಗ ನಮಗೆ ಉಸಿರಾಡುವ ಧೈರ್ಯ ಬಂದಿತು. ಪಟ್ಟಣಸ್ವಾಮಿ ಮಹಂತ ಶೆಟ್ಟರ ಅಧ್ಯಕ್ಷತೆಯಲ್ಲಿ ನಾಗರಿಕ ಸಮಿತಿಗಳನ್ನು ರಚಿಸಿಕೊಂಡು ಇನ್ನೂ ಉರಿಯುತ್ತಿದ್ದ ಬೆಂಕಿಯನ್ನಾರಿಸಿ, ನಗರವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದೆವು. ನಗರ ರಕ್ಷಕದಳ ಪುನರ್ಘಟಿತವಾಯಿತು,” ಎಂದ ಹರದನು ತನ್ನ ವಿವರಣೆ ಮುಗಿಸಿದನು. “ಮಾಧವ ನಾಯಕರ ಸೈನ್ಯ ಈಗ ಎಲ್ಲಿದೆ?” “ಆಂಜನೇಯ ಹೊಳೆ ದಾಟಿ ಕೃಷ್ಣಯ ಕಡೆ ಹೋಗುತ್ತಿರುವುದಾಗಿ ಅವರ ಕಡೆಯವರು ಹೇಳುತ್ತಾರೆ. ಸರ್ವಾಧಿಕಾರಿಗಳ ಹತ್ಯೆಗೆ ಶರಣರೇ ಕಾರಣರೆಂದು ಈಗ ಅವರು ನಗರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.” ಸೋಮೇಶ್ವರನು ಎಲ್ಲವನ್ನೂ ಸಾವಧಾನದಿಂದ ಕೇಳಿದನು. ತನ್ನ ಕಡೆಯ ಸೈನ್ಯಾಧಿಕಾರಿಗಳೊಡನೆ ಪರ್ಯಾಲೋಚನೆ ನಡೆಸಿದರು. ಬಳಿಕ ನಾಗರಿಕರಿಗೆ ಪುನಃ ದರ್ಶನಕೊಟ್ಟು “ನಾವು ಈ ಎಲ್ಲ ಘಟನೆಗಳ ಬಗೆಗೆ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆವಿಧಿಸುತ್ತೇವೆ. ಇಂದಿನಿಂದ ನಗರ ನಮ್ಮ ರಕ್ಷಣೆಯಲ್ಲಿರುವುದಾಗಿ ತಿಳಿದು ನೀವು ಸಮಾಧಾನದಿಂದ ನಿಮ್ಮ ನಿಮ್ಮ ಕಾರ್ಯಗಳಲ್ಲಿ ನಿರತರಾಗಬಹುದು. ಮಹಾದ್ವಾರಗಳನ್ನು ವಶಕ್ಕೆ ತೆಗೆದುಕೊಂಡು ನಗರದಲ್ಲಿ ಶಾಂತಿ ರಕ್ಷಣೆಗಳು ನೆಲಸುವಂತೆ ಏರ್ಪಡಿಸಲು ನಮ್ಮ ಸೈನ್ಯಾಧಿಕಾರಿಗಳಿಗೆ ಆಜ್ಞೆ ಮಾಡಿದ್ದೇವೆ.