ಈ ಪುಟವನ್ನು ಪ್ರಕಟಿಸಲಾಗಿದೆ

೪೨

ಕ್ರಾಂತಿ ಕಲ್ಯಾಣ

ಮಾನ್ಯ ಅತಿಥಿಗಳಾಗಿ ಇನ್ನೆಷ್ಟು ದಿನ ಇಲ್ಲಿರಬೇಕಾಗುವುದೋ? ಕರ್ಣದೇವರಸರು ಈ ದಿನ ಮಂಗಳವೇಡೆಗೆ ಹೋದರು. ಇನ್ನೊಂದು ವಾರ ಅವರು ಹಿಂದಿರುಗುವುದಿಲ್ಲ. ಅವರ ಪರೋಕ್ಷದಲ್ಲಿ ನಾನೇ ಈ ವಿಚಾರ ನಿರ್ಧರಿಸಬೇಕಾಗುವುದು."—ಕೃತಕ ವಿನಯದಿಂದ ಹೆಗ್ಗಡೆ ಹೇಳಿದನು.

"ಯೋಚಿಸಿ ನಿರ್ಧರಿಸಬೇಕಾದ ಮಹತ್ಕಾರ್ಯವಲ್ಲ ಇದು, ಓಲೆಯನ್ನು ತೆರೆದೇ ನಿಮಗೆ ಕೊಡುತ್ತೇನೆ. ನೀವು ಓದಿಕೊಂಡು ನಂಬಿಕಸ್ತನಾದ ಭಟನೊಬ್ಬನ ಕೈಯಲ್ಲಿ ಕ್ರಮಿತರಿಗೆ ಕಳುಹಿಸಬಹುದು."

-ಎಂದು ಅಗ್ಗಳನು ಓಲೆಯನ್ನು ಹೆಗ್ಗಡೆಗೆ ಕೊಟ್ಟನು. "ನಿಮಗಿಷ್ಟವಿರಲಿ ಇಲ್ಲದಿರಲಿ ಓಲೆಯನ್ನು ಓದಿಯೇ ಕಳುಹಿಸಬೇಕು. ಅದು ರಾಜಗೃಹದ ನಿಯಮ," -ಎಂದು ಹೆಗ್ಗಡೆ ಓಲೆಯನ್ನು ಬಿಚ್ಚಿ ಓದಿದನು. "ಇಷ್ಟು ಸಲಿಗೆಯಿಂದ ಬರೆಯಬೇಕಾದರೆ ಇವನು ಬಿಜ್ಜಳರಾಯರ ನಿಯುಕ್ತ ಅಧಿಕಾರಿಯೇ ಆಗಿರಬೇಕು. ಜಗದೇಕಮಲ್ಲರೊಡನೆ ಏನೋ ಸಂಧಾನಕ್ಕೆ ಬಂದಂತಿದೆ" ಎಂದು ಭಾವಿಸಿ ಅವನು, "ನಿಮ್ಮ ಇಚ್ಚೆಯಂತೆ ಈಗಲೆ ಧರ್ಮಾಧಿಕರಣಕ್ಕೆ ಕಳುಹಿಸುತ್ತೇನೆ. ಜಗದೇಕಮಲ್ಲರಸರು ನಾಳೆ ನಗರದಲ್ಲಿರುವುದಿಲ್ಲ. ಆ ವಿಚಾರವನ್ನೂ ಕ್ರಮಿತರಿಗೆ ತಿಳಿಸಬೇಕಾಗಿದೆ," ಎಂದನು.

"ಎಲ್ಲಿಗೆ ಹೋಗುತ್ತಾರೆ ಜಗದೇಕಮಲ್ಲರಸರು?" -ತುಟಿಗೆ ಬಂದ ಪ್ರಶ್ನೆ ಹಾಗೆಯೇ ಉಳಿಯಿತು.

ಉದಾಸೀನನಂತೆ ಅಗ್ಗಳನು, "ಈ ಅಲ್ಪ ವಿಚಾರಕ್ಕಾಗಿ ಹೇಳಿ ಕಳುಹಿಸಿದೆ, ಹೆಗ್ಗಡೆಗಳೆ. ನಿಮ್ಮ ಕಾರ್ಯಾವಸರಕ್ಕೆ ತೊಂದರೆಯಾಗಿದ್ದರೆ ಕ್ಷಮಿಸಿರಿ," ಎಂದು ವಿನಯವಾಡಿದನು.

"ನಿಜವಾಗಿ ನಾನು ತೊಂದರೆಯಲ್ಲಿ ಬಿದ್ದಿದ್ದೇನೆ, ಪಂಡಿತರೆ. ನಿಮ್ಮ ಸಲಹೆ ಕೇಳಲು ಬರಬೇಕೆಂದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ದಾಸಿ ಕರೆದಳು."

"ತೊಂದರೆ! ನಿಮಗೆ? ಏನಾಯಿತು ಹೆಗ್ಗಡೆಗಳೆ?" -ಸಹಾನುಭೂತಿಯ ನಗೆ ಹಾರಿಸಿ ಅಗ್ಗಳನೆಂದನು.

"ಎರಡು ದಿನದಿಂದ ಆಕಾಶ ಶುಭ್ರವಾಗಿರುವುದನ್ನು ಕಂಡು ಜಗದೇಕಮಲ್ಲರಸರಿಗೆ ಬೇಟೆಯ ಹುಚ್ಚು ಹತ್ತಿದೆ. ನಾಳೆಯೇ ಬೇಟೆಗೆ ಹೋಗಬೇಕೆಂದು ಹೇಳಿದ್ದಾರೆ. ಏನು ಮಾಡಬೇಕೋ ನನಗೊಂದೂ ತೋರುತ್ತಿಲ್ಲ" -ಹೆಗ್ಗಡೆ ದುಗುಡದಿಂದ ಹೇಳಿದನು.

ಅರಸರು ಬೇಟೆಗೆ ಹೋದರೆ ನಿಮಗಾಗುವ ತೊಂದರೆಯೇನು?"