ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೪೯

ಬರುತ್ತಿತ್ತು. ಇವು ಮೂರ್ಛಾರೋಗದ ಲಕ್ಷಣಗಳಂತೆ ಕಂಡರೂ ಪ್ರಭುಗಳ ಅರೆಮುಚ್ಚಿದ ಕಣ್ಣುಗಳ ದೃಷ್ಟಿ ನನ್ನನ್ನು ಅಚ್ಚರಿಗೊಳಿಸಿತು. ಅದರ ಅರ್ಥವೇನೆಂದು ನನಗೆ ತಿಳಿದಿದೆ. ಕೆಲವರ ಕಣ್ಣುಗಳಲ್ಲಿ ಆ ಮಾದರಿಯ ದೃಷ್ಟಿಯನ್ನು ನೋಡಿದ್ದೇನೆ."

ಕ್ರಮಿತನ ಕುತೂಹಲ ಇನ್ನೊಂದು ಮೆಟ್ಟಲು ಮೇಲೇರಿತು. "ಯಾರ ಮುಖಗಳಲ್ಲಿ ನೋಡಿದ್ದೀರಿ?” ಎಂದನು.

"ಯೋಗಿ ಸಾಧು ಸಂತರ ಕಣ್ಣುಗಳಲ್ಲಿ. ಅವರು ಧ್ಯಾನಕ್ಕೆ ಕುಳಿತು ಸಮಾಧಿಸ್ಥರಾದಾಗ ಅರೆಮುಚ್ಚಿದ ಅವರ ಕಣ್ಣುಗಳ ದೃಷ್ಟಿ ಯಾವುದೋ ಅಭೌಮ ಅದ್ಭುತವನ್ನು ಕಂಡಂತೆ ಸ್ಥಿರವಾದ ಅಪೂರ್ವ ಕಾಂತಿಯಿಂದ ಬೆಳಗುತ್ತದೆ. ಈ ದಿನ ಜಗದೇಕ ಮಲ್ಲರು ಎಚ್ಚರ ತಪ್ಪಿ ಬಿದ್ದಿದ್ದಾಗ ಅವರ ಕಣ್ಣುಗಳಲ್ಲಿ ಆ ಕಾಂತಿಯನ್ನು ನೋಡಿದೆ. ವಿಶೇಷವೆಂದರೆ ಯೋಗಿಗಳು ಪದ್ಮಾಸನದಲ್ಲಿ ಕುಳಿತು ಧ್ಯಾನಧಾರಣೆಗಳಿಂದ ಸಮಾಧಿ ಸ್ಥಿತಿಯನ್ನು ಪಡೆಯುತ್ತಾರೆ. ಜಗದೇಕಮಲ್ಲರಸರು ಮಲಗಿದ್ದಂತೆಯೇ ಸಮಾಧಿಸ್ಥರಾದದ್ದನ್ನು ಕಂಡು ನನಗೆ ಆಶ್ಚರ್ಯವಾಯಿತು."

ಕ್ರಮಿತನು ಬೆರಗುವಡೆದು ಎವೆಯಿಕ್ಕದೆ ಕೆಲವು ಕ್ಷಣಗಳು ಅಗ್ಗಳನ ಮೊಗನೋಡಿದನು. ಆಮೇಲೆ ಅವಿಶ್ವಾಸದ ನಗೆಹಾರಿಸಿ, "ಎಲ್ಲ ಕವಿಗಳಂತೆ ನೀವು ಭಾವಾಧೀನರು ಅಗ್ಗಳ, ತುಂಬೆಹೂವಲ್ಲಿ ಬ್ರಹ್ಮಾಂಡವನ್ನು ಕಾಣುವ ಸ್ವಭಾವ ನಿಮ್ಮದು. ಆದರೆ ರಾಜಾಂತಃಪುರಗಳಲ್ಲಿ ಬೆಳೆದ ನಿಮಗೆ ಯೋಗಿ ಸಾಧು ಸಂತರ ಪರಿಚಯವಾದದ್ದು ಹೇಗೆ?": ಎಂದನು.

"ಕವಿಯಾಗಲು ಜೀವನದ ಎಲ್ಲ ಮುಖಗಳ ಪರಿಚಯ ಅಗತ್ಯ ಕ್ರಮಿತರೆ,” ಅಗ್ಗಳನು ಉತ್ತರಿಸಿದನು. "ಅರಮನೆಗಲ್ತು, ಸೂಳೆಮನೆಗಲ್ತು, ಸವಣ್ಮನೆಗಲ್ತು-ಎಂದು ಪ್ರಾರಂಭವಾಗುವ ಆ ಪದ್ಯವನ್ನು ನೀವು ಕೇಳಿಲ್ಲವೆ?"

"ಅರಮನೆಗಲ್ತು, ಸೂಳೆಮನೆಗಲ್ತು, ಸವಣ್ಮನೆಗಲ್ತು, ಕೂಡೆ ಬ |
ಲ್ಲರ ಬಗೆಗಲ್ತು ವಸ್ತುಕೃತಿಯಂ ಸಲೆಪೇಳ್ವುದು, ಕಲ್ತು ಪೇಳದಂ |
ದರಮನೆಗಲ್ತು, ಸೂಳೆಮನೆಲ್ತು, ಸವಣ್ಮನೆಗಲ್ತು, ಕೂಡೆ ಬ |
ಲ್ಲರ ಬಗೆಗಲ್ತದಾವೆಡಗಮಲ್ತದು ಕಲ್ಪಿ ವಲಂ ಕವೀಂದ್ರ ರಾ ||

"ಅರಮನೆ ಗುರುಮನೆ ಸೂಳೆಮನೆಗಳ ವ್ಯವಹಾರವನ್ನು ಅರಿತು, ಅದರೊಡನೆ ಬಲ್ಲವರ ಮನೋಗತ ಅಭಿರುಚಿಗಳನ್ನು ತಿಳಿದುಕೊಂಡು ಕವಿ ಕಾವ್ಯವನ್ನು ರಚಿಸಬೇಕು. ಹೀಗೆ ಕಲಿತು ರಚಿಸದ ಕಾವ್ಯ ಅರಮನೆಗೆ ಸಲ್ಲ, ಬಲ್ಲವರನ್ನು ಅದು ಮೆಚ್ಚಿಸುವುದಿಲ್ಲ. ಕವೀಂದ್ರನೇ ಆಗಿರಲಿ, ಅಂತಹ ಕವಿಯ ಕಲ್ಪನೆ ಯಾವೆಡೆಯಲ್ಲಿಯೂ ಸಲ್ಲುವುದಿಲ್ಲ,” ಎಂದು ಅಗ್ಗಳನು ಮುಗಿಸಿದನು.