ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೬೭

ದಾಸ ಸೇಟರು. ನಾನು ಅವರ ಕಾರ್ಯದರ್ಶಿ ಚಂದನದಾಸ್. ನಾವು ಪಂಡರಪುರದ ನಿವಾಸಿಗಳು. ಬ್ರಹ್ಮಗಿರಿಗೆ ಯಾತ್ರೆ ಹೋಗಲು ಕಲ್ಯಾಣಕ್ಕೆ ಬಂದೆವು. ನಮ್ಮ ಯಾತ್ರಾತಂಡ ಒಟ್ಟಿಗೆ ಸೇರುವುದು ಸ್ವಲ್ಪ ತಡವಾದ್ದರಿಂದ ಇಲ್ಲಿಯ ಧರ್ಮಶಾಲೆಯೊಂದರಲ್ಲಿ ಎರಡು ದಿನಗಳಿಂದ ಉಳಿದಿದ್ದೇವೆ. ನಿನ್ನೆ ಸಂಜೆ ಇಬ್ಬರು ರಾಜಭಟರು ನಾವಿದ್ದ ಸ್ಥಳಕ್ಕೆ ಬಂದು, "ನಿಮ್ಮ ಸಾಮಾನುಗಳನ್ನು ಹುಡುಕಬೇಕು. ನೀವು ಸುಂಕಕೂಡದೆ ಹೊಯ್ಸಳ ರಾಜ್ಯಕ್ಕೆ ಚಿನ್ನ ಸಾಗಿಸುತ್ತಿರುವಿರೆಂದು ನಮಗೆ ಸುದ್ದಿ ಬಂದಿದೆ" ಎಂದರು. "ನಾವು ಯಾತ್ರೆಗೆ ಬಂದವರು. ದಾರಿಯ ವೆಚ್ಚಕ್ಕೆ ಬೇಕಾದ ಹಣದ ಹೊರತಾಗಿ ನಮ್ಮಲ್ಲಾವ ಚಿನ್ನವೂ ಇಲ್ಲ" ಎಂದೆವು ನಾವು. ಭಟರು ನಮ್ಮನ್ನು ಹೊಡೆದು ಬಡೆದು ನಮ್ಮ ವಸ್ತುಗಳನ್ನು ದೋಚಿದರು. ನಾವು ಪ್ರಾಣಭಯದಿಂದ ಓಡಿದೆವು."

ಸ್ವಾಮಿಗಳು ಯೋಚಿಸಿದರು: "ಇವರು ಹೇಳುವುದು ನಿಜವೇ? ರಾಜಭಟರ ಹಾವಳಿ ಈಚೆಗೆ ನಗರದಲ್ಲಿ ಹೆಚ್ಚುತ್ತಿದೆ. ನಿಜವಾಗಲಿ, ಅಲ್ಲದಿರಲಿ, ಶರಣು ಬಂದವರಿಗೆ ರಕ್ಷಣೆ ಕೊಡುವುದು ನಮ್ಮ ಕಾರ್ಯ" ಎಂದು ನಿರ್ಧರಿಸಿಕೊಂಡು, "ನೀವು ರಾತ್ರಿ ಎಲ್ಲಿದ್ದೀರಿ?" ಎಂದು ಕೇಳಿದರು.

"ಮಠದ ಹೆಬ್ಬಾಗಿಲಲ್ಲಿ, ಹುಲ್ಲುಗಾಡಿಯ ಮರೆಯಲ್ಲಿ ನಾವಿಲ್ಲಿಗೆ ಬಂದಾಗ ಮಧ್ಯರಾತ್ರಿಯಾಗಿತ್ತು."

"ಈಗ ನಮ್ಮಿಂದ ನಿಮಗೇನಾಗಬೇಕು?"

"ಯಾತ್ರಾ ತಂಡದ ನಾಯಕರು ಇನ್ನೆರಡು ದಿನದಲ್ಲಿ ಕಲ್ಯಾಣಕ್ಕೆ ಬರುತ್ತಾರೆ. ಅಲ್ಲಿಯವರೆಗೆ ರಾಜಭಟರಿಂದ ನಮ್ಮನ್ನು ರಕ್ಷಿಸಬೇಕು."

"ಆಮೇಲೆ ನೀವೇನು ಮಾಡುವಿರಿ?"

"ತಂಡದ ನಾಯಕರ ಮುಖಾಂತರ ಪ್ರಭುತ್ವಕ್ಕೆ ದೂರು ಕೊಡುವುದು. ನಮ್ಮ ಸಾಮಾನು ಹಣಕಾಸು ಸಿಕ್ಕಿದರೆ ಸರಿ. ಸಿಕ್ಕದೆ ಹೋದರೆ ಯಾತ್ರೆಯ ಯೋಚನೆ ಬಿಟ್ಟು ಪಂಡರಪುರಕ್ಕೆ ಹಿಂತಿರುಗುವುದು."

ಬ್ರಹ್ಮಶಿವನ ಸುಳ್ಳಿನ ಸರ ಕ್ರಮಕ್ರಮವಾಗಿ ವಾಸ್ತವತೆಯ ರೂಪು ತಾಳುತ್ತಿರುವುದನ್ನು ಕಂಡು ಬೊಮ್ಮರಸನು ತನ್ನಲ್ಲಿ ತಾನು ನಕ್ಕನು. ನಿಜವನ್ನು ಸಂದೇಹದಿಂದ ಕಂಡು, ಸುಳ್ಳನ್ನು ನಂಬುವುದು ಲೋಕ ಸ್ವಭಾವ, ಎಂದುಕೊಂಡನು.

ಸ್ವಾಮಿಗಳು, "ರಾಘವ | ರಾಘವ!" ಎಂದು ಕೂಗಿದರು.

ರಾಘವ ಅವರ ಮೆಚ್ಚಿನ ಕಾರ್ಯದರ್ಶಿ, ಓಡಿಬಂದು "ಏನು ಬುದ್ದೀ?" ಎಂದ.