ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೮೩

ಅವರು ನಿವೃತ್ತರಾಗುತ್ತಾರೆ. ಆಮೇಲೆ ಆ ಸ್ಥಾನವನ್ನು ನೀವು ಅಲಂಕರಿಸಬೇಕೆಂದು ನನ್ನ ಆಸೆ. ನೀವದನ್ನು ವ್ಯರ್ಥಗೊಳಿಸಬೇಡಿರಿ."

ಮಾತು ಮುಗಿಸಿ ಬಿಜ್ಜಳನು, ಸಾಭಿಪ್ರಾಯವಾಗಿ ಮಂಚಣನ ಕಡೆ ನೋಡಿದನು. ಬಿಜ್ಜಳನ ರಾಜಕೀಯ ಚತುರತೆ, ಈ ರೀತಿ ಅನುನಯ ಪ್ರಶಂಸೆಗಳ ಮಾರ್ಗ ಹಿಡಿದಾಗ ಅದನ್ನು ವಿರೋಧಿಸುವುದು ಎಂತಹವರಿಗೂ ಸಾಧ್ಯವಿಲ್ಲವೆಂಬುದನ್ನು ಮಂಚಣನು ತಿಳಿದಿದ್ದನು. ಚಾಲುಕ್ಯರಾಜ್ಯವನ್ನು ಕಬಳಿಸಿ, ವಿರೋಧಿ ಸಾಮಂತರನ್ನು ತನ್ನವರನ್ನಾಗಿ ಮಾಡಿಕೊಂಡು, ಸರ್ವಾಧಿಕಾರಿಯ ನಿರಂಕುಶ ನಿಷ್ಠುರ ಆಡಳಿತ ಜನಪ್ರಿಯವಾಗುವಂತೆ ಮಾಡಿದ ಮಂತ್ರಶಕ್ತಿ ಬಿಜ್ಜಳನ ಮಧುರ ವಚನಗಳೇ ಎಂಬುದು ಮಂಚಣನ ಅನುಭವವಾಗಿತ್ತು. ಅದಕ್ಕೆ ಪ್ರತಿಯಾಡುವ ಚತುರತೆ ನೈಪುಣ್ಯಗಳಾಗಲಿ, ಅದರ ಹಿಂದಿರುವ ವಂಚನೆ ವಿಪರ್ಯಾಸಗಳನ್ನು ಅರಿತುಕೊಳ್ಳುವ ಶಕ್ತಿಯಾಗಲಿ, ಅನುಭವಮಂಟಪದ ಶರಣರಿಗಿಲ್ಲವೆಂದು ಮಂಚಣನು ಭಾವಿಸಿದನು.

ಮನಸ್ಸಿನ ಈ ಒಳತೋಟಿಯನ್ನು ಅರಿತವನಂತೆ ಬಿಜ್ಜಳನು ಮಂಚಣನ ಕಡೆ ತಿರುಗಿ, ದನಿಯನ್ನು ಮತ್ತಷ್ಟು ಮೃದುವಾಗಿಸಿ, "ನೀವಾದರೂ ಚೆನ್ನಬಸವಣ್ಣನವರಿಗೆ ಹೇಳಬಾರದೆ, ಮಂಚಣನಾಯಕರೆ. ಚಾಲುಕ್ಯರಾಜ್ಯದ ಹಿತಚಿಂತನೆಯ ಹೊರತಾಗಿ ನನ್ನ ಸಲಹೆಗೆ ಮತ್ತಾವ ಉದ್ದೇಶವೂ ಇರುವುದಿಲ್ಲ," ಎಂದನು.

ಮಂಚಣನು ಮಧ್ಯಸ್ತಿಕೆಯ ಮಾರ್ಗಹಿಡಿದು, "ಚೆನ್ನಬಸವಣ್ಣನವರು ಪ್ರಭುಗಳ ಸಲಹೆಯನ್ನು ನಿರಾಕರಿಸುವುದಿಲ್ಲವೆಂಬ ಭರವಸೆ ನನಗಿದೆ. ಆದರೆ ಅನುಭವ ಮಂಟಪದ ಶರಣರೊಡನೆ ಆಲೋಚನೆ ಮಾಡದೆ, ಬಸವಣ್ಣನವರ ಅಭಿಪ್ರಾಯ ತಿಳಿಯದೆ ಒಪ್ಪಿಗೆ ಕೊಡುವುದು ಹೇಗೆ? ಉತ್ತರಕ್ಕಾಗಿ ಮೂರು ನಾಲ್ಕು ದಿನಗಳಾದರೂ ನಾವು ಕಾಯಬೇಕಾಗುವುದು," ಎಂದನು.

ಚೆನ್ನಬಸವಣ್ಣನವರು ಕೃತಜ್ಞತೆಯಿಂದ ಮಂಚಣನನ್ನು ಮನಸಾ ವಂದಿಸಿದರು. ಬಿಜ್ಜಳನು ಕ್ಷಣಕಾಲ ಅಸಮಾಧಾನದಿಂದ ಚಡಪಡಿಸಿದನು. ಪ್ರತಿಕ್ಷಣದಲ್ಲಿ ಮೋಸದ ಮಿದುನಗೆ ಬೀರಿ, "ಚೆನ್ನಬಸವಣ್ಣನವರು ನಾಲ್ಕಾರು ದಿನಗಳಲ್ಲಿ ತಮ್ಮ ಒಪ್ಪಿಗೆ ತಿಳಿಸಲಿ. ಅಷ್ಟರಲ್ಲಿ ನಾವು, ಅವರು ಮಂತ್ರಿಮಂಡಲಕ್ಕೆ ಸೇರುವರೆಂಬ ಶುಭ ವಾರ್ತೆಯನ್ನು ನಮ್ಮ ಸಾಮಂತಾಧಿಕಾರಿ ಮಾಂಡಲಿಕರಿಗೆ ತಿಳಿಸುವುದರಲ್ಲಿ ಅನುಚಿತವೇನಿದೆ?" ಎಂದನು.

ಚೆನ್ನಬಸವಣ್ಣನವರು ಆಗಲೂ ಮೌನ.