ಈ ಪುಟವನ್ನು ಪ್ರಕಟಿಸಲಾಗಿದೆ

೨೨

ಗೌರ್ಮೆಂಟ್ ಬ್ರಾಹ್ಮಣ


ನಾನು ಡಾಂಬರ್ ರಸ್ತೆ ಬಂದು ತಲುಪಿದಾಗ, ಅಜ್ಜಿಯ ಬಾಯಿ, ಎಮ್ಮೆಯ ಓಟ ಎರಡೂ ನಿಧಾನವಾಗಿದ್ದವು. ನನ್ನನ್ನ ಕಂಡಾಕ್ಷಣವೇ ರೇಗ ತೊಡಗಿದಳು:

"ಬರಬ್ಯಾಡ ಅಂತ ಹೇಳದ್ಯಾ....... ಕೇಳದ್ಯಾ?
ಎಲ್ಲ ಬಿಟ್ಟು ಉಂಡಿ ತಿನ್ಯಾಕ ಹೊಕ್ಕಾಳೋ ಅನ್ನಂಗ
ಓಡೋಡಿ ಬೆನ್ನತ್ತಿ ಬರ್ತಿ.
ಬಾ ಓಡಿ ಬಾ... ಯಾಕ ಅಳತಿ ಸುಮಕss......."
ನಂತರದಲ್ಲಿ ಅಜ್ಜಿಯೇ ತನ್ನ ಧ್ವನಿಯನ್ನು ಬದಲಾಯಿಸಿಕೊಂಡು ರಮಿಸಿದಳು.

ಅಜ್ಜಿಯ ತಲೆಯಲ್ಲಿ ಈಗ ಬೇರೆಯದೇ ಚಿಂತೆ. ನೇರ ನಮ್ಮೂರಿಗೆ ಹೋಗಿ ಪುನಃ ಬಸರಕೋಡಕ್ಕೆ ಹೋಗುವುದಾದರೆ ಹೆಚ್ಚಿನ ತಿರುಗಾಟ, ಕುಂಟೋಜಿಯಿಂದಲೇ ಬಸರಕೋಡಕ್ಕೆ ಹೊರಟರೆ ಹೊಟ್ಟೆಯ ಪಾಡು? ಆಗಲೇ ಸೂರ್ಯ ನೆತ್ತಿಯ ಮೇಲೆ ಬರುವ ಸಮಯವಾಗಿತ್ತು. ಆದರೆ ಅಜ್ಜಿ ನೇರ ನನಗೆ ಮನೆಗೆ ಹೋಗಲು ಹೇಳಿದರೂ ನಾನು ಒಪ್ಪಲಿಲ್ಲ. ನನಗೆ ಹಸಿವೆ ಇಲ್ಲ. ನಿನ್ನೊಟ್ಟಿಗೆ ಬರುವೆ, ನಡೆಯುವೆ ಎಂದು ಭರವಸೆಯನ್ನೂ ಕೊಟ್ಟೆ.

ಪಯಣ ಸಾಗಿತು. ಬಿಸಿಲಿಗೆ ಕಾಲು ಸುಡಲು ಪ್ರಾರಂಭವಾದವು. ಅದರಲ್ಲೂ ಡಾಂಬರ್ ರಸ್ತೆ ಬೇರೆ. ಚಕ್ಕಡಿಯ ರಸ್ತೆಗೆ ಬಂದು ಸೇರಿದೆವು. ಅಜ್ಜಿ ತನ್ನ ಕಾಲಲ್ಲಿಯ ಚಪ್ಪಲಿಗಳನ್ನು ತೆಗೆದು ನನಗೆ ಕೊಟ್ಟಿದ್ದಳು. ಅಜ್ಜಿಯ ಕಾಲಲ್ಲಿ ಕೆಲವು ಬಾರಿ ಬೇರೆ ಬೇರೆ ಜಾತಿಯ ಚಪ್ಪಲಿಗಳು ಇರುತ್ತಿದ್ದವು. ಎಂದರೆ, ಎಡಗಾಲಲ್ಲಿ ಇರುವ ಚಪ್ಪಲಿಯೇ ಬೇರೆ, ಬಲಗಾಲಲ್ಲಿ ಇರುವ ಚಪ್ಪಲಿಯೇ ಬೇರೆ. ಆದರೆ ನಾನು ಕಾಲಲ್ಲಿ ತೊಡುವ ಆ ಸಂದರ್ಭದಲ್ಲಿ ಒಂದು ಹೆಚ್ಚು ದಪ್ಪನೆಯ, ಇನ್ನೊಂದು ತೆಳ್ಳನೆಯ ಚಪ್ಪಲಿಯಾಗಿತ್ತು. ಅಜ್ಜಿಯ ಕಾಲುಗಳು ಮೊದಲೆ ದೊಡ್ಡವು. ನನ್ನ ಕಾಲು ಅವಳ ಕಾಲಿನ ಅರ್ಧ ಕಾಲೂ ಆಗುತ್ತಿರಲಿಲ್ಲ. ಆ ಚಪ್ಪಲಿಗಳನ್ನು ಹಾಕಿಕೊಂಡು ಹೊರಟರೆ, "ಟರ್ ಬರ್ ...... ಟರ್ ಬರ್" ಎಂಬ ಸದ್ದು ಬರುವುದರ ಜೊತೆಗೆ ಉಗಿಬಂಡಿಯಂತೆ ಧೂಳೂ ಏಳುತ್ತಿತ್ತು. ನನಗೆ ಕುದುರೆಯ ಹಾಗೆ ಕುಂಟುತ್ತ ನಡೆದ ಹಾಗೆ ಆಗುತ್ತಿತ್ತು. ಆದರೆ ಬಹಳ ಹೊತ್ತು ಆ ಚಪ್ಪಲಿಗಳನ್ನು ಹಾಕಿಕೊಂಡು ನಡೆಯಲಾಗುತ್ತಿರಲಿಲ್ಲ. ಅಜ್ಜಿಯ ಚಪ್ಪಲಿಗಳನ್ನು ತೊಟ್ಟಿದ್ದು ಅದೇ ಮೊದಲ ಬಾರಿಯೂ ಆಗಿರಲಿಲ್ಲ. ಹೊಲದ ಬದುವು ದಾಟುವಾಗ, ಮುಳ್ಳಿರುವ ಸ್ಥಳ ಬಂದಾಗ ಮಾತ್ರ, ಈ ಚಪ್ಪಲಿಗಳು ಕಾಲಲ್ಲಿ ಬರುತ್ತಿದ್ದವು. ಇನ್ನುಳಿದ ಸಮಯದಲ್ಲಿ ಕೈಯಲ್ಲಿಯೇ ಹಿಡಿದುಕೊಂಡು ನಡೆಯುವುದು ರೂಢಿಯಾಗಿತ್ತು.

ಬಸರಕೋಡ ಸಮೀಪಿಸುತ್ತಿದ್ದಂತೆ, ಊರ ದನಗಳು ಹಾಳು ಹೊಲದಲ್ಲಿ ಗುಡ್ಡದಲ್ಲಿ ಮೇಯುತ್ತಿದ್ದವು. ಈ ದನಗಳಲ್ಲಿ ಒಂದು ಎಮ್ಮ ಏನೆಂದು ಕರೆಯಿತೋ ಯಾರಿಗೆ ಗೊತ್ತು?