ಈ ಪುಟವನ್ನು ಪ್ರಕಟಿಸಲಾಗಿದೆ

೨೫


ಕರಿಯ ಬೆಕ್ಕು ಬೆಳ್ಳಗಾಗಲಿಲ್ಲ


ಕರಿಯ ಬೆಕ್ಕನ್ನು ಬಿಳಿಯದಾಗಿಸುವ ಬೀರಬಲ್ಲನ ಕಥೆ ಗೊತ್ತಿರಬೇಕಲ್ಲವೇ? ಅಂತಹದೇ ಒಂದು ಸಂದರ್ಭ. ಅದು, ನನ್ನ ತಾಯಿಯ ಸಾಹಸವೋ, ಹುಚ್ಚುತನವೋ, ಪ್ರೀತಿಯೋ ಏನೆಂದು ಕರೆಯಬೇಕು, ಸ್ಪಷ್ಟವಾಗುತ್ತಿಲ್ಲ.

ಈಗಲೂ ನನ್ನ ಮನೆಗೆ ಬಂದವರೆಲ್ಲ, ಒಮ್ಮೆ ನನ್ನ ಮುಖ ಮತ್ತೊಮ್ಮೆ ನನ್ನವ್ವನ ಮುಖ ನೋಡಿ ಅವಕ್ಕಾಗಿ ಪಿಳಿ ಪಿಳಿ ಕಣ್ಣು ಬಿಡುತ್ತಾರೆ. ಅಂತಹ ಹಾಲುಗೆನ್ನೆಯ ಬಣ್ಣ ನನ್ನ ತಾಯಿಯದು. ಆ ರೂಪ, ಬಣ್ಣದ ಶ್ರೀಮಂತಿಕೆ ನನ್ನಲ್ಲಿ ಏಕಿಲ್ಲ? ಎನ್ನುವುದು ಅವರ ಅಂತರಂಗದ ಪ್ರಶ್ನೆ. ಕೆಲವರು ಮನ ಬಿಚ್ಚಿ ಕೇಳಿ ತೃಪ್ತಿಪಟ್ಟರೆ, ಇನ್ನೂ ಕೆಲವರು ಕೇಳಲಾಗದೆ ಉಗುಳು ನುಂಗಿಕೊಂಡು ಹಾಗೆಯೇ ಹೋಗಿದ್ದಾರೆ ಎನ್ನುವುದು ನನಗೆ ಚೆನ್ನಾಗಿ ಗೊತ್ತು.

ನನಗಿಲ್ಲಿ ಅಡಿಗರ ಕವನದ ಸಾಲುಗಳು ನೆನಪಾಗುತ್ತಿವೆ.

ಕರೆಯುತ್ತಿವೆ ಹಿಮಗಿರಿಯ ಕಂದರ
ಬಂದೆಯಾ ಮಗು ಬಂದೆಯಾ.....
..............
ಗಿರಿಯ ಕಂದರ
ಕಂ....... ದ....... .......
ದ........ ರ........
ರ.........

ಅದೊಂದು ಕಂದರ, ಒಣಕಲ್ಲು ಬೆಟ್ಟ ಗುಡ್ಡಗಳಿಂದ ಕೂಡಿದ ಭಂವಾರಗಳ ಕಣಿವೆ. ಭಂವಾರದ ಬೀಡು, ಕಣಿವೆಯ ಕಾಡು, ಕಾಲಿಟ್ಟರೆ ಜೀನಿ ಜಾಲಿಗಳ ಮುಳ್ಳು, ಹಕ್ಕಿ, ಹಾವು, ಹುಳು ಕೀಟಗಳಿಂದ ಆವರಿಸಿದ ಭೀಕರ ಆದರೂ ಸೌಂದರ್ಯದ ಸೊಬಗಿನ ಸ್ಥಳ. ಇದರ ಬದಿಗೆ ಪ್ರದರ್ಶನಕ್ಕೆಂದು ಮಾಡಿಟ್ಟ ಹಾಗೆ ಕಾಣುವ ಕಂದಕ. ಆ ಕಂದಕದಿಂದ ಕಲರವ ಹರಿವ ನೀರಿನ ನಾದದೊಂದಿಗೆ ಚಿಲಿಪಿಲಿ ಹಕ್ಕಿಗಳ ಹಾಡು.