ನಾಲ್ಕನೆಯ ಪ್ರಕರಣ
ಒಂದುದಿನ ಚಂದ್ರಮತಿಯು ಪಾಠಶಾಲೆಗೆ ಹೊತ್ತುಮೀರಿ ಬಂದು, ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓದುವುದಕ್ಕೆ ತೋರದೆ ಖಿನ್ನಳಾಗಿ ನೆಲವನ್ನು ನಿಟ್ಟಿಸುತ್ತೆ ಕುಳಿತಿದ್ದಳು. ವಿದ್ಯಾಸಮುದ್ರನು ಅದನ್ನು ಕಂಡು ಮಕ್ಕಳಿಗೆ ಮನಸ್ಥೈರ್ಯವಿಲ್ಲದಿರುವಾಗ ಓದಿಸುವುದರಿಂದ ಪ್ರಯೋಜನವಿಲ್ಲವೆಂದು ಅರಿತವನಾದುದರಿಂದ ಅವಳನ್ನು ನಿರ್ಬಂಧಪಡಿಸದೆ, ಅವಳ ಮನೋವ್ಯಥೆಯ ಕಾರಣವನ್ನರಿತವನಾಗಿದ್ದರೂ ಆ ವಿಷಯವನ್ನವಳ ಬಾಯಿಂದಲೇ ಹೊರಡಿಸಿ ಸಂದರ್ಭಾನುಸಾರವಾಗಿ ಮತ್ತೆ ಕೆಲ ನೂತನವಿಷಯಗಳನ್ನು ತಿಳಿಸಬೇಕೆಂಬ ಅಭಿಲಾಷೆಯಿಂದ ಇಂತೆಂದನು —
ಗುರು- ಚಂದ್ರಮತೀ! ನೀನು ಯಾವಾಗಲೂ ಕಾಲಕ್ಕೆ ಸರಿಯಾಗಿ ತಪ್ಪದೆ ಬರುತ್ತಿದ್ದೆ. ಎಷ್ಟು ಕೆಲಸವಿದ್ದರೂ ನೀನು ಇಂದಿನವರೆಗೂ, ಯಾವಾಗಲೂ ಕಾಲವನ್ನತಿಕ್ರಮಿಸಿ ಬಂದವಳಲ್ಲ. ಇಂತಹ ನೀನು ಈದಿನ ಕಾಲವನ್ನು ಮೀರಿ ಆಲಸ್ಯವಾಗಿ ಬರುವುದಕ್ಕೆ ಕಾರಣವೇನು?
ಚಂದ್ರ-ನನ್ನನ್ನು ಬಾಲ್ಯದಿಂದಲೂ ಮೊನ್ನೆ ಮೊನ್ನೆಯವರೆಗೂ ಎತ್ತಿಕೊಂಡು ಆಡಿಸುತ್ತಿದ್ದ ವೃದ್ಧಳಾದ ಒಬ್ಬ ಪರಿಚಾರಿಣಿಯು ರಾತ್ರಿ ಆಕಸ್ಮಿಕವಾಗಿ ಮೃತಳಾದಳು. ಅವಳನ್ನು ಹಾವು ಕಚ್ಚಿತ೦ತೆ. ನಮ್ಮ ತಾಯಿಯು ಅತ್ತೆಯಮನೆಗೆ ಬಂದಾಗ ಅವಳ ತವರ್ಮನೆಯವರು ಆ ದಾಸಿಯನ್ನು ಬಳುವಳಿಯೊಡನೆ ಇಲ್ಲಿಗೆ ಕಳುಹಿಸಿದರಂತೆ. ಅವಳು ನನ್ನನ್ನು ತನ್ನ ಪಂಚಪ್ರಾಣಗಳೊಳಗೆ ಒಂದು ಪ್ರಾಣವೆಂದೆಣಿಸಿ ನೋಡಿಕೊಳ್ಳುತ್ತಿದ್ದಳು. ಇಷ್ಟು ಪ್ರೇಮವುಳ್ಳ ಸೇವಕಿಯು ಮೃತಳಾದಳೆಂಬ ವ್ಯಥೆಯಿಂದ ನಾನು ಕಾಲಕ್ಕೆ ಸರಿಯಾಗಿ ಬಾರದೆ ತಪ್ಪಬೇಕಾಯಿತು. ಈ ಅಪರಾಧವನ್ನು ದಯವಿಟ್ಟು ಮನ್ನಿಸಿರಿ. ಈಗಲೂ ನನ್ನ ಮನಸ್ಸು ಅಲ್ಲಿಯೇ ನಾಟಿರುವುದು.