ಈ ಪುಟವನ್ನು ಪ್ರಕಟಿಸಲಾಗಿದೆ

ಹದಿನಾಲ್ಕನೆಯ ಪ್ರಕರಣ.



ಹೀಗೆ ನಕ್ಷತ್ರಕನು ಹೊರಟುಹೋದ ತರುವಾಯ ವೀರಬಾಹುವು ಹರಿಶ್ಚಂದ್ರನನ್ನು ತನ್ನೊಡನೆ ಕರೆದುಕೊಂಡು ಹೋಗಿ, ಆ ಪಟ್ಟಣದಲ್ಲಿರುವ ಸ್ಮಶಾನಕ್ಕೆ ತಾನು ಅಧಿಕಾರಿಯೆಂದೂ, ಅಲ್ಲಿ ಶವಗಳನ್ನು ದಹನಮಾಡುವವರೆಲ್ಲರೂ ಒಂದು ಹಣ ತೆರಿಗೆಯನ್ನು ಕೊಟ್ಟು ಅಪ್ಪಣೆಯನ್ನು ಪಡೆದ ಬಳಿಕ ತಮ್ಮ ಕಾರ್ಯವನ್ನು ನೆರವೇರಿಸಬೇಕೆಂದೂ ತಿಳಿಸಿ, ಆತನಿಗೆ ವೀರದಾಸನೆಂಬ ಹೊಸ ಹೆಸರನ್ನಿಟ್ಟು, ತನಗೆ ಪ್ರತಿಯಾಗಿ ಹಗಲಿರುಳೂ ಅಲ್ಲಿದ್ದು ಕಾರ್ಯವನ್ನು ನಿರ್ವಹಿಸಬೇಕೆಂದು ನಿಯಮಿಸಿ ಪ್ರತಿದಿನದ ಊಟಕ್ಕೆ ಬೇಕಾಗುವ ಧಾನ್ಯವನ್ನು ಅಳೆದುಕೊಡುತ್ತಿದ್ದನು. ಹರಿಶ್ಚಂದ್ರನು ರುದ್ರಭೂಮಿಯಲ್ಲಿಯೇ ಒಂದು ಗುಡಿಸಲನ್ನು ಹಾಕಿಕೊಂಡು ವಾಸಮಾಡುತ್ತೆ, ತನ್ನ ಯಜಮಾನನು ಕೊಟ್ಟ ಅಕ್ಕಿಯನ್ನು ತಾನೇ ಅಡಿಗೆಮಾಡಿಕೊಂಡು ಊಟಮಾಡುತ್ತೆ, ದಿವಾರಾತ್ರಿಯಲ್ಲಿಯೂ ಸ್ವಾಮಿಭಕ್ತಿಯುಳ್ಳವನಾಗಿ ಅಲ್ಲಿಯೇ ಕಾದಿದ್ದು, ಶಕ್ತಿವಂಚನೆಯಿಲ್ಲದೆ ಸ್ವಕೃತ್ಯವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದನು.

ಅತ್ತ ಚಂದ್ರಮತಿಯೂ ಹಂಸನಾರಿಯೆಂಬ ಹೆಸರಿನಿಂದ ಬ್ರಾಹ್ಮಣನ ಮನೆಯಲ್ಲಿ ವಾಸಮಾಡುತ್ತ, ಆತನ ಪತ್ನಿಯು ನಿಯಮಿಸುವ ಕಾರ್ಯಗಳನ್ನೆಲ್ಲ ಮಾಡುತ್ತೆ, ಹೊಟ್ಟೆತುಂಬ ಅನ್ನವಿಡದಿದ್ದರೂ, ಬಟ್ಟೆಯನ್ನು ಕೊಡದಿದರೂ, ಅದನ್ನು ಕುರಿತು ಇತರರೊಡನೆ ಪ್ರಸ್ತಾಪಿಸದೆ, ಆ ಬ್ರಾಹ್ಮಣ ದಂಪತಿಗಳು ಎಂತಹ ಕೆಟ್ಟ ಮಾತುಗಳನ್ನಾಡಿದರೂ ಸೈರಿಸಿಕೊಂಡು ಭಯ ಭಕ್ತಿಯುಳ್ಳವಳಾಗಿ ನಡೆದುಕೊಳ್ಳುತ್ತಿದ್ದಳು. ಬ್ರಾಹ್ಮಣನು ಲೇಶವಾದರೂ ದಯೆಯಿಲ್ಲದವನಾಗಿ ಲೋಹಿತಾಸ್ಯನನ್ನೊಬ್ಬನನ್ನೇ ಫಲಪುಷ್ಪಾದಿಗಳನ್ನು ತರಲೋಸುಗ ಮಳೆಬಿಸಿಲುಗಳೆನ್ನದೆ ಕಾಡಿಗೆ ಕಳುಹಿಸುತ್ತಿದ್ದನು. ಹೀಗೆ ಆ ರಾಜಕುಮಾರನೊ೦ದು ದಿನ ಕೆಲಮಂದಿ ಬ್ರಾಹ್ಮಣಕುಮಾರರೊಡನೆ ಕಾಡಿಗೆ ಹೋಗಿ, ಹುತ್ತದಮೇಲೆ ಬೆಳೆದು ಹೂಬಿಟ್ಟಿದ್ದ ಒಂದು ಆಲದಮರದ ಕೊಂಬೆಯನ್ನು ಮೆಲ್ಲಗೆ ಬಾಗಿಸಿ ಅದರೆಲೆಗಳನ್ನು ಕೊಯ್ಯುತ್ತಿರಲು,