ಸೇರಿ, ತಂದಿದ್ದ ಕಟ್ಟಿಗೆಯಿಂದ ಚಿತೆಯನ್ನೇರ್ಪಡಿಸಿ ಪುತ್ರನನ್ನು ಅದರಮೇಲೆ ಮಲಗಿಸಿ ದುಃಖವನ್ನು ಸೈರಿಸಲಾರದೆ ಅಳತೊಡಗಿದಳು. ಆ ರೋದನವನ್ನು ಕೇಳಿ ಹರಿಶ್ಚಂದ್ರನು ಗುಡಿಸಿಲಿಂದ ಹೊರಕ್ಕೆ ಬಂದು ಶವವನ್ನು ತಂದಿರುವರಾರೆಂದು ಕೇಳಿದನು. ತನ್ನ ಹೆಸರು ಹಂಸನಾರಿಯೆಂದೂ, ತನ್ನ ಮಗನು ಸರ್ಪದಷ್ಟನಾಗಿ ಮೃತಿಯನ್ನಿದಿರುನೋಡುತ್ತಿರುವನೆಂದೂ ವಿಷವೈದ್ಯವು ತಿಳಿದಿದ್ದಪಕ್ಷದಲ್ಲಿ ಬಾಲಕನಿಗೆ ಪ್ರಾಣದಾನವನ್ನು ಮಾಡಬೇಕೆಂದೂ, ಚಂದ್ರಮತಿಯು ಆರ್ತಸ್ವರದಿಂದ ಹೇಳಿಕೊಂಡಳು.ಗದ್ಗದಸ್ವರದಿoದ ಆಡಿದ ಮಾತುಗಳಾದುದರಿಂದ ಹರಿಶ್ಚಂದ್ರನು ಪತ್ನಿಯ ಕಂಠವನ್ನು ಗುರುತಿಸಲಾರದೆ, ತಾನು ವೀರದಾಸನೆಂಬುವನೆಂದೂ, ಸ್ಮಶಾನಾಧಿಕಾರಿಯ ಸೇವಕನೆಂದೂ, ವಿಷವೈದ್ಯವನ್ನರಿಯೆನೆಂದೂ, ಹಣವನ್ನು ಕೊಟ್ಟಿಲ್ಲದೆ ಶವವನ್ನು ಅಲ್ಲಿ ದಹನಮಾಡಲಾಗದೆಂದೂ ಗಂಭೀರವಾಗಿ ನುಡಿದನು. ಆತನಾ ಅವಸ್ತೆಯಲ್ಲಿರುವ ವಿಷಯವನ್ನು ಅದುವರೆಗೂ ಅವಳು ಕೇಳಿ ತಿಳಿಯಳಾದುದರಿಂದ, ದೂರದಲ್ಲಿದ್ದು ಮಾತನಾಡಿದುದರಿಂದ, ತನ್ನ ಗಂಡನೆಂದು ಗುರುತಿಸಿಲಾರದೆಯೂ ಹೋಗಿ "ಸಮಸ್ತಭೂಮಂಡಲವನ್ನೂ ಏಕಛತ್ರಾಧಿಪತ್ಯ ದಿ೦ದಾಳುತ್ತಿದ ಸಾರ್ವಭೌಮನ ಮಗನಿಗೆ ದಹನಕ್ರಿಯೆಗೋಸುಗ ಒಂದು ಹಣವನ್ನು ತರುವ ಶಕ್ತಿಯೂ ಇಲ್ಲದೇಹೋಯಿತಲ್ಲಾ! " ಎಂದು ಅತ್ತಳು. ಆ ರೋದನವನ್ನು ಕೇಳಿದ ತತ್‌ಕ್ಷಣವೇ ಅವಳು ತನ್ನ ಪತ್ನಿಯೇನೋ ಎಂದು ಹರಿಶ್ಚಂದ್ರನು ಸಂಶಯಪಟ್ಟು ಕಳವಳಗೊಂಡು ತಿರುಗಿ ಧೈರ್ಯವನ್ನು ತಾಳಿ, ಮತ್ತಷ್ಟು ಸಮೀಪಕ್ಕೆ ಬಂದು " ನೀನು ಅಂತಹ ಮಹಾರಾಜನಿಗೆ ಧರ್ಮಪತ್ನಿಯಾಗಿದ್ದರೆ ನಿನಗೀ ದಾರಿದ್ಯ್ರವು ಸಂಘಟಿಸುವುದಕ್ಕೆ ಕಾರಣವಿಲ್ಲವಲ್ಲಾ! ನಿನ್ನ ಕೊರಳಲ್ಲಿ ಪ್ರಕಾಶಿಸುತ್ತಿರುವ ತಾಳಿಯನ್ನಾದರೂ ಮಾರಿ ಹಣವನ್ನು ಕೊಡು" ಎಂದು ನುಡಿದನು. ಅಷ್ಟರಲ್ಲಿ ಚಂದ್ರಮತಿಯು ಆತನನ್ನು ಗುರ್ತಿಸಿ ಅವನಿಗೆ ಸಂಭವಿಸಿದ ದುರವಸ್ಥೆಯನ್ನೂ ಲೋಹಿತಾಸ್ಯನು ಮೃತನಾದುದನ್ನೂ ಕುರಿತು ಪ್ರಲಾಪಿಸಿ * ಮೊದಲು ನಿಮ್ಮ ತೊಡೆಯಮೇಲೆ ಮಲಗಿ ನಿದ್ರಿಸುತ್ತಿದ್ದ ಮುದ್ದು ಮೊಗದ ಲೋಹಿತಾಸನನ್ನು ನೋಡಿ " ಎಂದಾತನ ಕಾಲಮೇಲೆ ಕೆಡಹಿ ಅಳತೊಡಗಿದಳು. ಆಮಾತು ಕಿವಿಗೆ ಬಿದ್ದೊಡನೆಯೇ ಎದೆಯೊಡೆದು
ಪುಟ:ಚಂದ್ರಮತಿ.djvu/೭೯
ಈ ಪುಟವನ್ನು ಪ್ರಕಟಿಸಲಾಗಿದೆ
೭೨
ಚ೦ದ್ರಮತಿ.