ಈ ಪುಟವನ್ನು ಪ್ರಕಟಿಸಲಾಗಿದೆ

ಚೆಲವು

ಇಲ್ಲಿ ಮಲೆಗಳ ನಡುವೆ ನಡುಗಳನು ಕೊರೆದು
ತಿಳಿಯ ನೀಲದ ನೀರ ಹಿರಿದು ಹೊಳೆಯೊಂದು,
 ಕಲ್ಲು ಮಣ್ಣಿನ ಹಾಸಿನಗಲಗಲಿ ಹರಹಿ,
ಚಲಿಸುವುದೆ ತಿಳಿಯದೊಲು ಮೆಲುಮೆಲನೆ ಉರುಳಿ
ಹಿಂದಾದುದನು ನೆನೆವ ಮನ ನಿಂದು ನೆನೆದು
 ಮುಂದರಿವ ತೆರದೆ ಮುಂದರಿಯುತಿದೆ ಜನಿದು.

ಮೆಲುಗಾಳಿ, ಪೂರುವದ ಗಿರಿಗಳೆಡೆಯಿಂದ
ಹರಿತಂದು, ಎದುರಿನಲ್ಲಿ ಹರಿದು ಮುಂಬರಿದ
ತಿಳಿವೆಳಗ ಕಿರಣ ಸರಣಿಯ ಭರದೊಳಪ್ಪಿ,
ಸರಸದಲಿ ಅದರೊಡನೆ ನಲಿದಾಡುತಿಹುದು.
ಹಿರ್ವ ದೇವಿಯ ಅವಳಿಮಕ್ಕಳಿವರೊಲವ
ಸರ್ವವನ ನೋಡಿ ಮೆಚ್ಚಿತು ತಳೆದು ನಲವ.

ನೀರು ನೆಲ ಮಲೆಸಾಲು ಹೊಂಬಿಸಿಲು ಗಾಳಿ
ವನ ನಭಗಳನುಸರಣೆಯಲ್ಲಿ ಸೇರಿ ಒಂದು
ಧೋರಣಿಯೊಳೀ ಸಂಜೆಗಿತ್ತ ಮೆರುಗಿದಕೆ
ಧನದ ಕನಕದ ಹೊರೆಯ ಚೆಂದ ಎಣೆಯಹುದೆ?
ತಾಯಿ ಪ್ರಕೃತಿಯ ಮೊಗದವೀಕಾಂತಿ ಶಾಂತಿ ;
 ಈಯಂದ ಚಂದ; ಈ ಪ್ರೇಮವಿಭ್ರಾಂತಿ.