೨ | ಜಾಗರ
ವಾದ್ಯಗಳ ರಚನೆ ಮತ್ತು ವಾದನ ಶೈಲಿ ಯಕ್ಷಗಾನಕ್ಕೆ ಸೂಕ್ತವಾದ ಕಥಾವಸ್ತು,
ಛಂದಸ್ಸು, ಅಭಿವ್ಯಕ್ತಿಯಲ್ಲಿ ಇರುವ ರಂಗ ಪದ್ಧತಿಯ ತಂತ್ರಗಳು ಇವಿಷ್ಟು. ಇದು
ಆ ಕಲೆಯ ಮೂಲ ವ್ಯಾಕರಣ ಅಥವಾ ಚೌಕಟ್ಟು, ಯಕ್ಷಗಾನದ ಬಗ್ಗೆ ಮಾಡುವ
ಯಾವುದೇ ವಿವೇಚನೆ ಅರ್ಥಪೂರ್ಣವಾಗಬೇಕಾದರೆ ಇದರ ಬಗ್ಗೆ ಒಂದು ಒಪ್ಪಿಗೆ
ಬೇಕು. ಯಕ್ಷಗಾನಕ್ಕೆ ಸಂಪ್ರದಾಯವೆಂಬುದೇ ಇಲ್ಲ ಎಂದು ಹೇಳುವುದಾದರೆ, ಅದು
ಕಲಾವಿಮರ್ಶೆಗೆ ಏನೂ ಸಂಬಂಧವಿಲ್ಲದ ಮಾತು.
ಯಾವುದೇ ಪರಂಪರಾಗತ ಕಲೆಯ ಸುಧಾರಣೆ ಎಂದರೆ, ಆ ಕಲೆಯ ಒಟ್ಟು
ಮೂಲಸ್ವರೂಪ, ಶೈಲಿಗಳನ್ನು ಕಾಪಾಡಿಕೊಂಡು ಆ ಕಲೆಯನ್ನು ಹೆಚ್ಚು ಸತ್ವ
ಪೂರ್ಣವಾಗಿ, ಪರಿಣಾಮವಾಗಿ, ಪರಿಣಾಮಕಾರಿಯಾಗಿ ಬೆಳೆಸಿ ಅದಕ್ಕೆ ಶುದ್ಧ ರಕ್ತ
ತುಂಬುವ ಕೆಲಸ, ಅದಕ್ಕೆ ಕಲಾತ್ಮಕವಾದ ಹೊಸ ಆಯಾಮಗಳನ್ನು ನೀಡುವ
ಶಿಸ್ತು ಬದ್ಧವಾದ ಸೃಷ್ಟಿಕ್ರಿಯೆ. ಇಂದು, ಸುಧಾರಣೆಯ ಹಣೆಪಟ್ಟಿ ಹೊತ್ತು
ಬಂದಿರುವ ಅನೇಕ ಬದಲಾವಣೆ'ಗಳು ಅಜ್ಞಾನದಿಂದಲೋ, ವ್ಯಾಪಾರೀ ಮನೋ
ಧರ್ಮದಿಂದಲೋ, ಅನುಕೂಲಕ್ಕೆಂದೋ, ಆಲಸ್ಯದಿಂದಲೋ ಮಾಡಿರುವ ವಿಕೃತ
ಚೇಷ್ಟೆಗಳು; ಮತ್ತು ಅವನ್ನು ಸರಿಯೆಂದು ಜಾಣ ತನದ ವಾದ ಹೂಡುವ ಪ್ರವೃತ್ತಿ
ಅತ್ಯಂತ ಅಪಾಯಕಾರಿ ವಿಚಾರ, ಕಲೆಯ ಮೊದಲ ಶತ್ರು. 'ಕಲೆಕ್ಷನಿ'ಗಾಗಿ
ಮಾಡಿದ ಬದಲಾವಣೆಗೆ ಕಲಾವಿಮರ್ಶೆಯಲ್ಲಿ ದೊರಕಬೇಕಾದುದು ಖಂಡನೆ ಮಾತ್ರ.
ಕಲೆಯಲ್ಲಿ ನಿಜವಾದ ಸುಧಾರಣೆ ಮಾಡಲೆಳಸುವವನು ಕಲೆಯ ಸಂಪ್ರ
ದಾಯ, ಶೈಲಿಗಳನ್ನು ಅಭ್ಯಸಿಸಿ, ಸಮಗ್ರವಾಗಿ ಗ್ರಹಿಸಬೇಕು. ಸುಧಾರಣೆ ಎಷ್ಟು,
ಹೇಗೆ, ಎಲ್ಲಿ ಎಂಬುದನ್ನು ಗುರುತಿಸಲು ಆ ರಂಗ ಪ್ರಕಾರ ಅವನ ಮನಸ್ಸಿಗೆ ಇಳಿದು
ಕರಗಿರಬೇಕು. ಸಂಪ್ರದಾಯದ ಕುರಿತಾದ ಅಜ್ಞಾನ ಯಾ ಅನಾಸ್ಥೆಗಳು ಸುಧಾ
ರಣೆಯನ್ನು ತಪ್ಪುದಾರಿಗೆಳೆದು, ಕಲೆಯ ಸೌಂದರ್ಯಕ್ಕೆ ಅಪಚಾರವೆಸಗುವುವು.
ನಮ್ಮಲ್ಲಿ: ಈಚೆಗೆ ಬಳಕೆಗೆ ಬಂದಿರುವ ಹಲವು ಪ್ರಸಂಗಗಳು ವೇಷಭೂಷಣಗಳು,
ಗಾನ ರೀತಿ ಇವೆಲ್ಲ ಯಕ್ಷಗಾನದ ಗಾಯನ, ನೃತ್ಯ, ತಂತ್ರ, ಚಿತ್ರಗಳಿಗಿರುವ ಅನನ್ಯ
ಸ್ವತಂತ್ರ ರೂಪ ಮತ್ತು ಅವುಗಳೊಳಗಿರುವ ಸಂಬಂಧಗಳ ಅರಿವಿಲ್ಲದೆ ತಯಾರಾ
ದಂಥವು.
ಸುಧಾರಣೆ ಎಂದರೆ ಯಾವುದನ್ನೂ ಯಾವುದಕ್ಕೋ ಸೇರಿಸುವ ತಟಪಟವಲ್ಲ. ಅದು ಆಳವಾದ ಪರಿಶ್ರಮವನ್ನು ಒಳಗೊಂಡ ಗಂಭೀರ ಕ್ರಿಯೆ. ಶೈಲಿಗೆ ನಿಷ್ಠನಾಗಿ, ಅದರ ಸೌಂದರ್ಯವರ್ಧನೆಗೆ ದುಡಿಯುವುದೇ ನಿಜವಾದ ಸುಧಾರಣೆ.ಅನ್ಯ ಶೈಲಿಯ ಮೋಹ, ಚಮತ್ಕಾರದ ಚಪಲ, ಕಲಾಮೌಲ್ಯದ ಬಗ್ಗೆ ಗೊಂದಲ ಕೇವಲ ಹೊಸತನಕ್ಕಾಗಿ ಹೊಸತನದ ಆಕರ್ಷಣೆ ಇವು ಸುಧಾರಣೆಗೆ ಅಡ್ಡಿ.