ಈ ಪುಟವನ್ನು ಪ್ರಕಟಿಸಲಾಗಿದೆ

೧೦೨ | ಜಾಗರ
ವ್ಯಾಸಭಾರತ, ವಾಲ್ಮೀಕಿ ರಾಮಾಯಣಗಳು ನವೀನ ಸಾಹಿತ್ಯಕ ಧೋರಣೆಗಳಿಗೆ ತುಂಬ ಹತ್ತಿರ ಇವೆ. ಅಲ್ಲಿ ಅತಿರಂಜನೆ, ಕಪ್ಪು, ಬಿಳುಪಿನ ಸರಳ ಚಿತ್ರಣ ಇರುವುದಿಲ್ಲ. ಜಡ್ಡು ಸಾಂಪ್ರದಾಯಿಕ ದೃಷ್ಟಿಯೂ ಅಲ್ಲ. ಇದನ್ನು ತಿಳಿದು ಚಿತ್ರಿಸಲು ಯತ್ನಿಸ ಬಹುದು. ಆದರೆ ಹೀಗೆ ಮಾಡುವಾಗ ಪ್ರಸಂಗ ಕಾವ್ಯಗಳು ಭಕ್ತಿಯುಗದ ಆದರ್ಶಕ್ಕೂ, ಮಧ್ಯಯುಗದ ಮೌಲ್ಯಗಳಿಗೂ ಜೋತು ಬಿದ್ದಿವೆ ಎಂಬ ಸ೦ಗತಿ ಮರೆಯುವಂಥದ್ದಲ್ಲ. ಪ್ರಸಂಗ, ಅರ್ಥಧಾರಿಯ ಮೇಲೆ ಹೇರುವ ಮಿತಿ ಬಹಳ ಮಹತ್ವದ್ದು. ಪೌರಾಣಿಕ ವಸ್ತುವಿನಲ್ಲಿ ಹೊಸತನದ ಚಿತ್ರಣ ಹೇಗೆ ಬರಬೇಕು ಎಂಬುದಕ್ಕೆ ನಮಗೆ ಶ್ರೀ ವಿ ಸ ಖಾಂಡೇಕರರ “ಯಯಾತಿ, ಇರಾವತಿ ಕರ್ವೆಯರ 'ಯುಗಾಂತ', ಗಿರೀಶರ “ಯಯಾತಿ”, “ಹಯವದನ” ಜಿ.ಆರ್.ಪಾಂಡೇಶ್ವರರ 'ಯಕ್ಷಗಾನ ಮಾರಾವತಾರ', “ಎಸ್. ಎಲ್. ಭೈರಪ್ಪನವರ” “ಪರ್ವ', ಮುನ್ಶಿ ಅವರ “ಕೃಷ್ಣಾವತಾರ" ಮುಂತಾದವು ದಾರಿ ತೋರುತ್ತವೆ. ಇವುಗಳಲ್ಲಿ ಪೌರಾಣಿಕ ವಸ್ತು ವಿಗೆ ನೂತನ ಅರ್ಥಕಲ್ಪನೆ ಹೇಗೆ ತರಬಹುದೆಂಬುದು ಸುಂದರವಾಗಿ ವ್ಯಕ್ತವಾಗು ಇದೆ. ಅವುಗಳ ಲೇಖಕರಿಗಿರುವ ಸ್ವಾತಂತ್ರ್ಯ, ಪ್ರಸಂಗದ ಸೀಮೆಯೊಳಗೆ ಸಂಚರಿಸ ಬೇಕಾದ ಅರ್ಥಧಾರಿಗೆ ಇಲ್ಲ ನಿಜ. ಆದರೆ ಅಂತಹ ಒಂದು ಪ್ರಜ್ಞೆ ಕಲ್ಪನೆಯ ಕದವನ್ನು ತೆರೆದೀತು. ಪುರಾಣಗಳ ಕುರಿತು ಬಂದಿರುವ ಆಧುನಿಕ ವಿಮರ್ಶೆಯನ್ನು ಅರ್ಥಧಾರಿ ಓದುವುದೂ ಅವಶ್ಯ.
ಅರ್ಥಗಾರಿಕೆಯೆಂಬುದು ಬಹಳಷ್ಟು ಬೌದ್ಧಿಕ ಮತ್ತು ದೈಹಿಕ ಶ್ರಮವನ್ನು ಬಯಸುವ ಕ್ಷೇತ್ರ. ನಿದ್ದೆ ಕೆಡಿಸುವ ಕೆಲಸ, ಸತತ ಅಧ್ಯಯನ, ಚಿಂತನ ಇಲ್ಲಿ ಅವಶ್ಯ. ಇದನ್ನು ಒಂದು ಪೂರ್ಣ ಪ್ರಮಾಣದ ಸೀರಿಯಸ್‌ ಆಸಕ್ತಿಯಾಗಿ ಗ್ರಹಿಸದೆ ಯಶಸ್ಸು ಅಶಕ್ಯ, ಪ್ರಸಂಗ, ಪುರಾಣದ ಒಳಹೊಕ್ಕು, ಬುಡಮುಟ್ಟಿ, ಅಲ್ಲಿಂದ ಭಾವ, ವಿಚಾರಗಳನ್ನು ತೆಗೆದು ಹೊರಗೆಡಹುವ ಸಾಮರ್ಥ್ಯ ಬಹು ಪ್ರಯಾಸದ್ದು. ಇತರ ಕಲೆಗಳ ಪರಿಚಯ, ನ್ಯಾಯ, ದಂಡನೀತಿಗಳ ಜ್ಞಾನ, ಪ್ರಕೃತಿ ಪ್ರೇಮ, ರಸಿಕತೆ, ಮಾತಿನೊಂದಿಗೆ ಹಿತಮಿತ ಅಭಿನಯ, ಹಸ್ತಭಾವಗಳ ಸ್ವಭಾವ, ಲೋಕಪರಿಶೀಲನದ ಗುಣ, ಭಾವುಕತೆ, ವೈಚಾರಿಕತೆಗಳ ತೂಕಬದ್ಧ ಮಿಲನ ಇವೆಲ್ಲ ಅರ್ಥಧಾರಿಗೆ ಕಲಾ ಪ್ರೌಢಿಮೆಗೆ ಪೋಷಕವಾಗಿ ಇರಬೇಕಾದ ಅಂಶಗಳು.

೧೧

ತಾಳಮದ್ದಳೆಯ ಇತಿಹಾಸದುದ್ದಕ್ಕೂ ಅನೇಕ ಖ್ಯಾತನಾಮ ಕಲಾವಿದರ ಹೆಸರುಗಳನ್ನು ಕೇಳುತ್ತೇವೆ. ನನ್ನ ಗಮನಕ್ಕೆ ಬಂದಿರುವ ಕೆಲವು ಮುಖ್ಯ ಕಲಾವಿದರ ಬಗೆಗೆ ಈಗ ನೋಡೋಣ. ನಾನು ಇಲ್ಲಿ ಕೊಟ್ಟಿರುವ ಯಾದಿ ಸಮಗ್ರ ವಲ್ಲ.