೧೧೮ | ಜಾಗರ
ಸಮಗ್ರತೆಯನ್ನು ಹೊಂದಿರುವುದರಿಂದ, ಮಾತಿನ ಒಟ್ಟು ಹೊಣೆ ಅಲ್ಲಿ ಕಡಿಮೆ
ಎಂಬುದು ಅಲ್ಲಿ ವಿವಕ್ಷಿತ.
ಅರ್ಥಗಾರಿಕೆಯಲ್ಲಿ ಧರ್ಮ ನೀತಿಗಳ ಅಂಶವು ಹೇಗೆ ಬರಬೇಕು ಎಂಬಲ್ಲಿ
ಯೂ ಪೆರ್ಲ, ಉಚ್ಚಿಲ್ ಇಬ್ಬರೂ ನಂಬಿಯಾರರ ನಿಲುವಿಗೆ ಆಕ್ಷೇಪ ಎತ್ತಿದ್ದಾರೆ.
ಪೌರಾಣಿಕ ನಾಟಕ ಮಾಧ್ಯಮವೊಂದರಲ್ಲಿ ಧರ್ಮ, ನೀತಿ ಬೋಧನೆಗಳ ಅಂಶಕ್ಕೆ
ಆಸ್ಪದ ಹೆಚ್ಚು. ಆದರೆ, ವಿಚಾರ ಮಂಥನ, ಬೋಧನೆಗಳೇ ಮುಖ್ಯ ಉದ್ದೇಶ
ವಲ್ಲ ಎಂಬುದು ನಂಬಿಯಾರರ ನಿಲುವು. ಕೆಲವು ಸಲ ವಿವಾದ ಬರುವುದು ಒಂದು
ಕಲ್ಪನೆಯನ್ನು ವಿಭಿನ್ನ ವ್ಯಾಪ್ತಿಯಲ್ಲಿ ಇಬ್ಬರು ಬಳಸಿದಾಗ, ಪದ್ಯದ ಅರ್ಥ
ವನ್ನಷ್ಟೇ ಅರ್ಥಧಾರಿ ವಿಸ್ತರಿಸಬೇಕೆಂಬ ಪ್ರಬಂಧಕಾರರ ನಿಲುವಿಗೆ ಪೆರ್ಲ, ಉಚ್ಚಿಲರು
ಎತ್ತಿದ ಆಕ್ಷೇಪವೂ ಇದೇ ರೀತಿಯದ್ದು, ಬರಿಯ ಪದ್ಯದ ಅರ್ಥಕ್ಕಾಗಿ, ಕತೆಗಾಗಿ
ಕಲಾರಸಿಕರು ಕುತೂಹಲಿಗಳಲ್ಲ ನಿಜ, ಆದರೆ ಪದ್ಯ ವಿಧಿಸುವ ಮಿತಿಯನ್ನು ದಾಟಿ
ಸಂದರ್ಭದ ಔಚಿತ್ಯವನ್ನು ಮೀರಿದ ಮಾತು ಅನುಚಿತ. ಮಾತುಗಾರಿಕೆ ಪದ್ಯದ
ಚೌಕಟ್ಟಿಗೆ ನಿಷ್ಠವಾಗಿರಬೇಕೆಂಬುದು ಪ್ರಬಂಧಕಾರರ ನಿಲುವು. ಅರ್ಥ, ವಾದಗಳು
ದೀರ್ಘವಾಗುವುದೇ ಈ ಮಾಧ್ಯಮದ ಒಂದು ಲಕ್ಷಣ. ಅದು ದೀರ್ಘವಾದರೂ
ರುಚಿಕರವಾಗಿ, ವಿಷಯಕ್ಕೆ ಅಂಟಿಕೊಂಡು ಇದ್ದಾಗ ಅಪೇಕ್ಷಣೀಯವೇ ಆಗಿದೆ,
ಎಂದು ಉಚ್ಚಿಲ್, ಪೆರ್ಲ ಇವರಿಬ್ಬರ ನಿಲುವೆಂದು ನನಗೆನಿಸುತ್ತದೆ.
ಮಾತಿನ ಪ್ರತಿ ಅಂಶವೂ ರಸಾತ್ಮಕವಾಗಿರಬೇಕು - ಎಂಬ ನಂಬಿಯಾರರ
ವಾದಕ್ಕೆ ಉಚ್ಚಿಲರ ಆಕ್ಷೇಪ ವಾಸ್ತವವಾದಿಯಾದುದು. ಮಾತಿನ ಅದರಲ್ಲೂ
ಆಶುಭಾಷಣದ ರಸ - ಧ್ವನಿ ಔಚಿತ್ಯಗಳ ಸೀಮೆ ತುಸು ಸಡಿಲವಾದದ್ದು.
ಬರಹದ ನಿಖರತೆಯನ್ನು ಅಲ್ಲಿ ಅಪೇಕ್ಷಿಸಲಾಗದು, ರಸ ಮತ್ತು ಚಿಂತನದ
ಕುರಿತು ನಂಬಿಯಾರ್ ಮತ್ತು ತೋಳ್ಪಾಡಿ ಅವರು ಕಲಾವಿದನಿಂದ ಅತಿಯಾದ
ನಿರೀಕ್ಷೆ, ಪ್ರತೀಕ್ಷೆ ಮಾಡುತ್ತಿದ್ದಾರೆಂದು ನನ್ನೆಣಿಕೆ.
ಯಕ್ಷಗಾನದ ಮಾತು, ಘಟನಾವಳಿಗಳಲ್ಲಿ ಬರುವ ಚರ್ವಿತ ಚರ್ವಣ, ಈ
ಕಲೆಗೆ ಅಂಟಿದ ಒಂದು ರೋಗ.
ಪ್ರಸಂಗದಲ್ಲಿ ಬರುವ ಪುನರುಕ್ತಿ ಸಾಲದ್ದಕ್ಕೆ,
ಅರ್ಥಧಾರಿಗಳು ಮತ್ತಷ್ಟು ಬೆಳೆಯುತ್ತಾರೆ. (ವಾಲಿವಧೆಯಲ್ಲಿ ರಾಮನ ಪೂರ್ವ
ವೃತ್ತಾಂತ ಐದಾರು ಸಲ ಬರುತ್ತದೆ.) ಇದಕ್ಕೆ ಬಲವಾದ ಪ್ರತಿಭಟನೆ ಸಲ್ಲಿಸಿ
ನಂಬಿಯಾರರೂ, ಉಚ್ಚಿಲರೂ ಒಂದು ಉಪಯುಕ್ತ ಚರ್ಚೆಯನ್ನು ಆರಂಭಿಸಿದ್ದಾರೆ.
(ಚರ್ವಿತ ಚರ್ವಣದ ಬಗ್ಗೆ ಈಗಾಗಲೇ ಕಲಾವಿದರಲ್ಲೂ, ಪ್ರೇಕ್ಷಕರಲ್ಲೂ
ಪ್ರತಿಭಟನೆ ಇದೆ.)
ಅರ್ಥಗಾರಿಕೆಯಲ್ಲಿ ಸಮಕಾಲೀನ ಪ್ರಜ್ಞೆ, ಪದ ಪ್ರಯೋಗಗಳ ಬಗ್ಗೆ ಈ