ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ - ೨

ಮನಸ್ಸಿನೊಳಗಿಂದ ವಿಶ್ವಾಸ ಇಲ್ಲದಿರುವ ಹಿನ್ನೆಲೆ - ಇವುಗಳ ನೆಲೆಯಲ್ಲಿ ತಾನು ಹೂಡಿದ ಅಸ್ತ್ರದ ಬಗ್ಗೆ ಸಮಾಲೋಚಿಸುವುದು ಸಂಭವವಲ್ಲ. ಕರ್ಣನ ವ್ಯಕ್ತಿ ಸ್ವಭಾವಕ್ಕೂ ಇದು ವಿರುದ್ಧ. ಇಲ್ಲಿ ಕರ್ಣನದು ವೀರಭಾಷಣ. ಉತ್ಸಾಹದಿಂದ ಆಡಿದ ಆತ್ಮವಿಶ್ವಾಸದ ಹೆಗ್ಗಳಿಕೆಯ ಮಾತು. ಪ್ರಸಂಗದಲ್ಲಿ ಇದು ಸ್ಪಷ್ಟವಾಗುತ್ತದೆ. "ಏನು ಸಾರಥಿ...." ಎಂಬ ಭಾಮಿನಿ ಷಟ್ಟದಿಗೆ ಮೊದಲು, "...... ಮಾತಾಡಿದ ನಗ್ಗಳಿಕೆ" ಎಂದು ಸ್ಪಷ್ಟವಾಗಿ ಹೇಳಿದೆ. ಬಾಣವನ್ನು "ಆಡಂಬರ"ದಿಂದ ಹೂಡಿದನೆಂದೂ ಇದೆ. ಕರ್ಣನು ಪ್ರಶ್ನೆ ಕೇಳಿದುದೋ, ಅಥವಾ ಸಲಹೆಯನ್ನು ಬಯಸಿದುದೋ ಅಲ್ಲವಾದರೆ, ಶಲ್ಯನು ಮುಂದೆ ಸಲಹೆ ನೀಡಿದುದೇಕೆ ಎಂಬ ಒಂದು ಸಂದೇಹಕ್ಕೆ ಅವಕಾಶವಿದೆ. ಆದರೆ, ಕರ್ಣನು ಸಲಹೆ ಕೇಳಿದರೇನೇ ಶಲ್ಯನು ಕೊಡಬೇಕೆಂದೇನೂ ಇಲ್ಲ. ಕರ್ಣನ ಉತ್ಸಾಹವನ್ನು ಕಂಡ ಶಲ್ಯನು "ಅಸ್ತ್ರವೇನೋ ಅಸಾಮಾನ್ಯವಾದುದೇ. ಆದರೂ, ನಿನ್ನ ಉತ್ಸಾಹಕ್ಕೆ ಆತ್ಮವಿಶ್ವಾಸದ ಭರದಲ್ಲಿ ಶರಸಂಧಾನ ತಪ್ಪಿ ಹೋಗಿರುವುದನ್ನು ಗಮನಿಸು. ಅದನ್ನು ಸರಿಪಡಿಸಿದರೆ ಮಾತ್ರ ನೀನು ಬಯಸಿದ ಪರಿಣಾಮವಾಗಲು ಸಾಧ್ಯ" ಎಂದು ಹೇಳಿದುದಾಗಿದೆ, ಎಂದು ಸ್ಪಷ್ಟವಾಗುತ್ತದೆ.

ಅಲ್ಲಿಂದ ಮುಂದೆ ಶಲ್ಯನಿಗೆ ಎರಡು ಪದ್ಯಗಳಿವೆ: ಎಲೆ ಭಾನುಜಾತ ಕೇಳಸ್ತ್ರದ ನೆಲೆಯನು | ತಿಳಿಯದ ನೀಹೂಡಿದೆ | ನಳಿನಾಕ್ಷನಾತನ ರಥದೊಳಗಿರೆ ನಿನ್ನ | ಗೆಲುವರೆ ಬಿಡುವನೇನೈ || ಅಸ್ತ್ರದ ನೆಲೆಯನ್ನು ತಿಳಿಯದೆ ಪ್ರಯೋಗಿಸಿ ದುದರಿಂದ ಗೆಲುವು ಅಸಾಧ್ಯ. ಚತುರ ಸಾರಥಿಯಾದ ಕೃಷ್ಣನಿರುವಾಗ ನಿನ್ನನ್ನು ಗೆಲ್ಲಲು ಬಿಡಲಾರ - ಎಂಬುದು ತಾತ್ಪರ್ಯ. ಹಾಗಾದರೆ ಒದಗಬಹುದಾದ ಈ ಅಪಯಶಸ್ಸಿಗೆ ಏನು ಪರಿಹಾರ? ಕೊರಳಿಗೆ ಹಿಡಿದರೆ ಮಕುಟಕೆ ತಾಗುವ | ದುರಕಾಗಿ ಬೆಸಸಿದರೆ | ಶಿರವ ಕತ್ತರಿಪುದಿದು ಸಿದ್ಧ ಬೇಗದಿ | ಮರಳಿ ನೀ ತೊಡುಯೆಂದನು | ಗುರಿಯನ್ನು ಬದಲಾಯಿಸಬೇಕು. ಕೊರಳಿಗೆ ಹಿಡಿದ ಗುರಿಯನ್ನು ಎದೆಗೆ ಹಿಡಿಯಬೇಕು. ಯಾಕಾಗಿ ಬದಲಾಯಿಸಬೇಕು? - "ಕೊರಳಿಗೆ ಹಿಡಿದರೆ ಮಕುಟಕೆ ತಾಗುವುದು" - ಆದುದರಿಂದ ಎದೆಗೆ ಗುರಿ ಹಿಡಿದರೆ, ಕೊರಳಿಗೆ ತಾಗುತ್ತದೆ. ಇದು ಶಲ್ಯನ ಊಹೆ. ಸಮಸ್ಯೆ ಇರುವುದು ಇಲ್ಲೆ. - ಸರ್ಪಾಸ್ತ್ರವನ್ನು ಕರ್ಣನು ಗುರಿಹಿಡಿದಿರುವಂತೆ ಬಿಟ್ಟರೆ, ಅದು ಅರ್ಜುನನ ಕೊರಳಿಗೆ ತಾಗಲಾರದು ಎಂಬುದಕ್ಕೆ ಶಲ್ಯನು ನೀಡುವ ಕಾರಣಗಳು ಎರಡು.

1) "......ಅಸ್ತ್ರದ ನೆಲೆಯನು ತಿಳಿಯದೆ ನೀಹೂಡಿದೆ" - ಎಂಬುದು ಒಂದು. ಅಂದರೆ ಕರ್ಣನು ಸರ್ಪಾಸ್ತ್ರದ ನೆಲೆಯನ್ನು ತಿಳಿಯದೆ; ಅಥವಾ ಗುರಿ ಹೂಡಬೇಕಾದ ಕ್ರಮವನ್ನು ಯೋಚಿಸದೆ ಹೂಡಿರುವುದು ಕಾರಣ.

2) "ನಳಿನಾಕ್ಷನಾತನ ರಥದೊಳಗಿರೆ ನಿನ್ನ ಗೆಲುವರೆ ಬಿಡುವನೇನೈ" -