ಈ ಪುಟವನ್ನು ಪ್ರಕಟಿಸಲಾಗಿದೆ
ಹಾಸ್ಯ ಮತ್ತು ಔಚಿತ್ಯ / ೧೪೩

ಶವೂ ಪಾತ್ರಕ್ಕೆ ಇಲ್ಲ.

ಆದರೆ ಪ್ರೇಕ್ಷಕರಿಗೆ ಅದು ಹಾಸ್ಯವಾಗುತ್ತದೆ. ಅಂದರೆ ಅಭಿವ್ಯಕ್ತಿಯಲ್ಲಿ ಹಾಸ್ಯವಿಲ್ಲ. ಆದರೆ ಪರಿಣಾಮದಲ್ಲಿ ಇದೆ; ಉದಾ: ಜಲಂದರನ ಕಥೆಯಲ್ಲಿನ 'ಮದ್ಯಪಾನ' ಮಾಡಿದ ದೇವೇಂದ್ರನ ಒಂದೆರಡು ದೃಶ್ಯಗಳ ರಂಗ ವ್ಯವಹಾರ,

ಕೆಲವೊಂದು ಕಥೆಗಳಲ್ಲಿ ಹಾಸ್ಯಪಾತ್ರವೊಂದು ಪ್ರಧಾನ ಪಾತ್ರವೂ ಆಗಿರುತ್ತದೆ. ಆಗ ಕೇವಲ ತಿಳಿಹಾಸ್ಯ ಸಾಲದು, ಪಾತ್ರಧಾರಿಯು ಇಡಿಯ ಒಂದು ಪಾತ್ರಕ್ಕೆ ಆಕಾರ ಕೊಟ್ಟು ಚಿತ್ರಣ ಮಾಡಿ, ಕಥೆಯೊ೦ದಿಗೆ ಬೆಸುಗೆ ತಪ್ಪದಂತೆ, ಹಾಸ್ಯ ರಸ ನಿರೂಪಣೆ ಮಾಡಬೇಕಾಗುತ್ತದೆ. ಇಂಥಲ್ಲಿ ಹಾಸ್ಯವು ಒಂದು ಅಂಗವಾಗಿ, ಒಂದು "Variety' ಆಗಿ ಬರುವುದಿಲ್ಲ. ಕಥಾವಾಹಕವಾಗಿಯೂ ಬರುತ್ತದೆ. ಉದಾಹರಣೆಗಾಗಿ, 'ಸತಿಶೀಲವತಿ' ಕಥೆಯ ಚಿತ್ರಾಂಗ; 'ಭಾಸವತಿ' ಕಥೆಯ ಒಬ್ಬ ಹೆಡ್ಡ ರಾಜಕುಮಾರ, 'ಚಂದ್ರಾವಳಿ'ಯ ಚಂದಗೋಪ ಮುಂತಾದವರನ್ನು ಉಲ್ಲೇಖಿಸಬಹುದು. ಇಂಥ ಪಾತ್ರಗಳಲ್ಲಿ ಹಾಸ್ಯದೊಂದಿಗೆ ಇತರ ರಸಗಳೂ ಇದ್ದು, ಪಾತ್ರಚಿತ್ರಣ ಹೆಚ್ಚಿನ ಹೊಣೆಯುಳ್ಳದ್ದಾಗುತ್ತದೆ.


ನಾಟಕದಲ್ಲಿ ಯಾವುದೇ ರಸವು ಒಂದೇ ಪಾತ್ರದಿಂದ ಉತ್ಪತ್ತಿಯಾಗುತ್ತದೆ. ಎಂದಿಲ್ಲ ತಾನೆ! ಯಕ್ಷಗಾನದಲ್ಲಿ ಕೆಲವು 'ಮಾಮೂಲು' ಹಾಸ್ಯ ಗಳಿವೆ. ಹಾಸ್ಯಗಾರನೊಂದಿಗೆ ಮಾತಾಡುವ ರಾಜನೋ, ರಾಕ್ಷಸನೋ, ಅಥವಾ ಇತರ ಯಾರೇ ಇರಲಿ, ಅವನ ಮಾತಿನ ಜಾಡು ಹೀಗೆಯೇ ಇರಬೇಕು, ಇಂತಿಂಥ ಪ್ರಶ್ನೆಗಳನ್ನು ಮಾತ್ರ ಕೇಳಬೇಕು ಎಂಬ ಒಪ್ಪಂದದ ಹಾಗಿನ ಏರ್ಪಾಡು ಇರುತ್ತದೆ. ಆ ಪ್ರಶ್ನೆಗಳು ಬಾರದಿದ್ದರೆ ಆ ಮಾಮೂಲು ಹಾಸ್ಯವು ಹಾಸ್ಯಗಾರನ ಬಾಯಿಯಿಂದ ಹೊರಡದು. ಒಂದೆರಡು ಉದಾಹರಣೆ ನೋಡಿ.

ರಾಜ : ಶತ್ರುಗಳೊಂದಿಗೆ ನೀನೇನು ಮಾಡಿದೆ?
ದೂತ : ಹೊಡೆದಾಟ ಮಾಡಿದೆ.
ರಾಜ : ಹೇಗೆ?
ದೂತ : ಅವರೂ ಹೊಡೆದರು; ನಾನೂ ಹೊಡೆದೆ.
ರಾಜ : ಅವರೇನು ಹೊಡೆದರು?
ದೂತ : ಪೆಟ್ಟು ಹೊಡೆದರು
ರಾಜ : ನೀನೇನು ಹೊಡೆದೆ?
ದೂತ : ಬೊಬ್ಬೆ!
ದೇವೇಂದ್ರ : ರಾಕ್ಷಸರು ಏನು ಹೇಳಿದರು?
ದೂತ : (ಅಭಿನಯಿಸಿ) ಎಲವೊ ಪಾಪಿ, ನೀನೇಕೆ ಇಲ್ಲಿ ಕುಳಿತಿರುವೆ!