ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ಪರಂಪರೆ / ೧೩

ಯನ್ನುಳಿಸುವಲ್ಲಿ, ಅದರಲ್ಲಿ ಸೇರಿಕೊಂಡಿರುವ ಕಳೆಗಳನ್ನು ಕೀಳುವ ಕೆಲಸಕ್ಕೂ ಅಷ್ಟೇ ಮಹತ್ವ ಇದೆ. ಹೊಸಬೆಳೆ, ಹೊಸತಳಿ ಆಗಬೇಕೇ ಹೊರತು ಅದು ಬೇರೆಯೇ ಆಗಬಾರದಷ್ಟೆ.

ಯಕ್ಷಗಾನದಂತಹ ಅನ್ಯಕಲೆಗಳಲ್ಲಿ ಮತ್ತು ಯಕ್ಷಗಾನವೆಂದೇ ಕರೆಯಲ್ಪಡುವ ದೊಡ್ಡಾಟ, ಸಣ್ಣಾಟ ಇತ್ಯಾದಿಗಳಲ್ಲಿ ಸಾಮಾಜಿಕವಾದ ಕತೆಗಳು ಹಿಂದೆಯೇ ಬಂದಿವೆ ಎಂಬ ವಾದವೂ ನಮ್ಮ ಯಕ್ಷಗಾನಕ್ಕೆ ಪ್ರಸ್ತುತವಾಗಲಾರದು. ಏಕೆಂದರೆ ಇದು ಹೆಚ್ಚು ಪರಿಪೂರ್ಣವೂ, ಶೈಲೀಕೃತವೂ ಆದ ಕಲೆಯಾಗಿ ಬೆಳೆದಿದೆ. ಆ ವಾದವನ್ನೊಪ್ಪಿದರೆ ಯಕ್ಷಗಾನದ ಸ್ವಂತಿಕೆಗೆ ತಿಲಾಂಜಲಿ ಇತ್ತಂತೆಯೇ.

ಯಕ್ಷಗಾನದ ವೇಷ, ಸಂಗೀತ, ತಂತ್ರಗಳಿಂದಲೇ ಪೌರಾಣಿಕ ಕಾಲ ಮತ್ತು ಪೌರಾಣಿಕ ಸ್ವರೂಪದ ಕತೆಗಳನ್ನೇ ಬಳಸಿ ಹೊಸ ಸಂದೇಶ, ಹೊಸ ಆಶಯವನ್ನು ಮೂಡಿಸಲು ಸಾಧ್ಯ ಇರುವ ಅದೇ ಕವಚಕ್ಕೆ ಹೊಸ ತಿರುಳು ಕೂಡಿಸುವ ಕೆಲಸ ಅದು. ಕಂಸವಧೆ, ದಮಯಂತಿ, ಕೃಷ್ಣ ಸಂಧಾನ, ವಿಶ್ವಾಮಿತ್ರ - ಇಂತಹ ಕೃತಿಗಳ ಮಂಡನಾ ವಿಧಾನ, ಪಾತ್ರ ಚಿತ್ರಣ ಕ್ರಮದಲ್ಲಿ ಆಧುನಿಕ ಸಾಹಿತ್ಯಾಂಶಗಳನ್ನು ಚಿಂತನವನ್ನು, ಮನಃ ಪ್ರವೃತ್ತಿಗಳನ್ನು ತರಲು ಸಾಧ್ಯ.

ಕಾಲಕ್ಕೆ ತಕ್ಕಂತೆ ಕಲೆ ಬದಲಾಗುತ್ತ ಹೋಗಬೇಕೆಂಬುವ ವಾದವೂ, ಸ್ವತಃ ಒಂದು ಗಟ್ಟಿಯಾದ ವಾದ. ಆದರೆ, ಹಾಗೆ ಹೇಳುವುದು, ಕಲೇತರವಾದ, ವ್ಯಾಪಾರಿ ಬದಲಾವಣೆಗಳನ್ನು ಸಮರ್ಥಿಸುವುದಕ್ಕಾಗಿ ಬಂದಾಗ ಕ್ಷುದ್ರವೂ, ಅಸಂಬದ್ಧವೂ ಆಗುತ್ತದೆ. ಕಲೆ ಒಳಗಿಂದ ಬೆಳೆಯಬೇಕು. ಅದರಲ್ಲಿ ಬರುವ ಬದಲಾವಣೆ ಕಾಲದ - (ಅಂದರೆ ಕಲಾತ್ಮಕವಾದ ನೂತನ ಅಭಿವ್ಯಕ್ತಿಯ ಅನಿವಾರ್ಯ ಒತ್ತಡದ ನಿಜವಾದ ಅವಶ್ಯಕತೆಯಾಗಿ ಬರಬೇಕೇ ಹೊರತು, ಕಲೆಯ ಪರಿವೆಯಾಗಲಿ, ಯಕ್ಷಗಾನ 'ಅವಯವ ಸಮಗ್ರತೆ'ಯ ಕಲ್ಪನೆಯಾಗಲೀ ಇಲ್ಲದೆ ಬಂದಾಗ ಸಂತೆಯ ಸೊತ್ತಾಗುತ್ತದೆ. ಅನುಕೂಲಕ್ಕೆ, ಅಜ್ಞಾನಕ್ಕೆ ಹಣ ಮಾಡಲಿಕ್ಕೆ, - ಹೀಗೆ ಹಲವು ಕಾರಣಗಳಿಂದ ಮಾಡಲಿಕ್ಕೆ - ಕಲೆಯ ಸೂತ್ರಗಳನ್ನು ಗಾಳಿಗೆ ತೂರಿ ಬದಲಾವಣೆ ತಂದವನು 'ಕಾಲಕ್ಕೆ ತಕ್ಕ ಪರಿವರ್ತನೆ'ಯ) ಮಾತಾಡುವುದು ಸಾಂಸ್ಕೃತಿಕ ದ್ರೋಹಃ ಆತ್ಮವಂಚನೆ.

ಯಕ್ಷಗಾನದ ರೂಪ ವಿಧಾನವನ್ನು ಬದಲಾಯಿಸದೆ ಅದಕ್ಕೆ ಹೊಸ ಆಶಯವನ್ನು ನೀಡಲು ಸಾಧ್ಯವೆ? ಎಂಬುದೀಗ ನಿಜವಾದ ಪ್ರಶ್ನೆ. ಏಕೆಂದರೆ ಕಲೆಯ-ವಿಶೇಷತಃಪಾರಂಪರಿಕ ಕಲೆಯ- ರೂಪವು ಅದರ ಅಭಿವ್ಯಕ್ತಿಕ್ರಮ, ಆಶಯ ಮೌಲ್ಯವ್ಯವಸ್ಥೆ ಇತ್ಯಾದಿಗಳ ಮೇಲೆ ಕೆಲವು ಮಿತಿಗಳನ್ನು ಹೇರುತ್ತದೆಂಬುದು ನಿಜ. ಆದರೆ ಆ ಮಿತಿಗಳೊಳಗೇ ಹೊಸ ಆಶಯ ಮೂಡಿದರೆ ಸಾಲದೆ? ಏಕೆಂದರೆ 'ಪೂರ್ಣ