ಈ ಪುಟವನ್ನು ಪ್ರಕಟಿಸಲಾಗಿದೆ
ಮೂರು ತಿಟ್ಟುಗಳು /೨೭

ನೃತ್ಯವಿದೆ.

ಭಾವಾಭಿವ್ಯಕ್ತಿ, ಅಭಿನಯ ಮತ್ತು ರಸಾವಿಷ್ಕಾರದ ಸೂಕ್ಷ್ಮತೆಗಳ ದೃಷ್ಟಿ ಯಿಂದ ಉತ್ತರ ಕನ್ನಡದ ತಿಟ್ಟು ಅತ್ಯಂತ ಪರಿಷ್ಕೃತವಾಗಿ ಸಾಕಷ್ಟು ಬೆಳವಣಿಗೆ ಸಾಧಿಸಿದೆ. ಅಲ್ಲಿ ವಿಸ್ತಾರವಾದ ಅಭಿನಯ, ಅದರ ಪುನರಾವರ್ತನೆ, ಸೂಕ್ಷ್ಮ ಸಂಚಾರಿ ಭಾವಗಳ ವಿವರವಾದ ಅಭಿವ್ಯಕ್ತಿ ಇದೆ. ನೃತ್ಯದಲ್ಲಿ ವೈವಿಧ್ಯಪೂರ್ಣ ಮನೋಧರ್ಮಕ್ಕೆ ಅವಕಾಶವಿದ್ದು, ಕಲಾವಿದನಿಗೆ ಸಾಕಷ್ಟು ಪರಿಶ್ರಮ ಮತ್ತು ಅವಕಾಶ ಎರಡೂ ಇವೆ. ಆದುದರಿಂದ ಅಲ್ಲಿಯ ಹಿಮ್ಮೇಳದಲ್ಲೂ ಸಾಹಿತ್ಯದ ಕಡೆ, ಭಾವದ ಕಡೆ ಬಹಳ ಒತ್ತು ಇದೆ. ಅಲ್ಲಿನ ಹಿಮ್ಮೇಳ ಉಳಿದ ತಿಟ್ಟು ಗಳ ಹಿಮ್ಮೇಳಕ್ಕಿಂತ ಹೆಚ್ಚು ಹೊಣೆ ಹಾಗೂ ಶ್ರಮವಿರುವ ವಿಭಾಗ, ಹಾಡುಗಳನ್ನು ವಿಭಜಿಸಿ ಪುನರಾವರ್ತಿಸಿ ಹಾಡುವ ಕ್ರಮವಿದೆ. ಯಕ್ಷಗಾನವು ಒಂದು ಪರಿಪೂರ್ಣ ರಂಗಭೂಮಿ (Total theatre) ಎಂಬ ಮಾತಿಗೆ ಸಶಕ್ತ ದೃಷ್ಟಾಂತ ಉತ್ತರ ಕನ್ನಡದ ಪದ್ಧತಿ.

ಈಚೆಗೆ ಉತ್ತರ ಕನ್ನಡ ತಿಟ್ಟಿನ ಪ್ರಭಾವ ಉಳಿದೆರಡೂ ತಿಟ್ಟುಗಳ ಮೇಲೆ ಆಗಿದೆ. ಬಡಗುತಿಟ್ಟು ಸಾಧಿಸಿದ ಪ್ರಗತಿ ಮತ್ತು ಪುನರುಜ್ಜೀವನಕ್ಕೆ ಉತ್ತರ ಕನ್ನಡ ಕಲಾವಿದರ ಕೊಡುಗೆ ಬಹಳ ದೊಡ್ಡದು - ಅದೇ ಕಾರಣ ಎಂಬ ಷ್ಟು ಉತ್ತರ ಕನ್ನಡ ಪದ್ದತಿಯ ನೃತ್ಯ, ಅಭಿನಯಗಳು, ಉಳಿದ ಪ್ರದೇಶದ ಜನರಿಗೆ ಹೊಸ ರಸಲೋಕವನ್ನೇ ತೆರೆದು ತೋರಿಸಿದವು. ಉತ್ತರ ಕನ್ನಡದ ನೃತ್ಯ ಅಭಿನಯ ಗಳು ಮರಾಠಿ ನಾಟಕಗಳಿಂದ ಬಂದುವೆಂಬ ಒಂದು ಅಭಿಪ್ರಾಯವಿದೆ. ಆದರೆ ಅದು ಅವಸರದ ತೀರ್ಮಾನ ಎನಿಸುತ್ತದೆ. ಏಕೆಂದರೆ ಅಲ್ಲಿನ ನಟರಲ್ಲಿ ಹೆಚ್ಚಿನವರಿಗೆ ನಾಟಕಗಳ ಸಂಪರ್ಕವೇ ಇಲ್ಲ. ಅಲ್ಲದೆ ಆ ತಿಟ್ಟಿನಲ್ಲಿ ಈಗಿರುವುದಕ್ಕಿಂತ ಹೆಚ್ಚು 'ಪದಾಭಿನಯ ಹಿಂದೆ ಇತ್ತೆಂದು ಹಳೆಯ ವೇಷಧಾರಿಗಳ ಅಂಬೋಣ.

ಸಂಪ್ರದಾಯವನ್ನು ಉಳಿಸಿ ಬೆಳೆಸುವುದರಲ್ಲಿ ಬಡಗು, ಉತ್ತರ ಕನ್ನಡ ತಿಟ್ಟುಗಳು ಎಚ್ಚರ ವಹಿಸಿವೆ. ಅಲ್ಲಿ ಹೊಸ ಪ್ರಸಂಗಗಳನ್ನು ಕೂಡಾ ಯಕ್ಷಗಾನ ರಂಗಭೂಮಿಯ ಮೂಲ ಚೌಕಟ್ಟಿಗೆ ಭಂಗ ತಾರದೆ ಪ್ರಯೋಗಿಸುತ್ತಾರೆ. ಲಾಸ್ಯ, ಸಂಪ್ರದಾಯದ ಹೆಜ್ಜೆ. ವೇಷಗಳ ಅಚ್ಚುಕಟ್ಟುಗಳಲ್ಲಿ ಬಡಗೂ, ಅಭಿನಯ, ನಾಟ್ಯ, ಮಾತುಗಳ ಪ್ರೌಢತೆ, ಸೂಕ್ಷ್ಮತೆಗಳಿಗೆ ಉತ್ತರ ಕನ್ನಡ ಪದ್ಧತಿಯ ವೇಷಗಳ ಭರ್ಜರಿ ಆಕಾರ, ಕುಣಿತದ ಗಾಂಭೀರ, ಬೆಡಗು, ಚೆಂಡೆಯ ನಾದ, ಮಾತಿನ ವೈವಿಧ್ಯಗಳಲ್ಲಿ - ತೆಂಕುತಿಟ್ಟೂ ಪ್ರಗತಿ ಸಾಧಿಸಿವೆ. ಉತ್ತರ ಕನ್ನಡ ತಿಟ್ಟಿನ ಅಭಿನಯ ಕೆಲವೊಮ್ಮೆ ಅತಿಯಾದ ಪುನರಾವರ್ತನೆ, ಭಾವ ವಿಭಜನೆಗಳಿಂದ ಬಾಲಿಶ ಯಾ ಅತಿ ಅನಿಸುವುದಿದೆ.