ಈ ಪುಟವನ್ನು ಪ್ರಕಟಿಸಲಾಗಿದೆ


ಹವ್ಯಾಸೀ -ಯಕಗಾನ ಸಂಘಗಳು


ಹವ್ಯಾಸೀ ಕಲಾಸಕ್ತರ ಒಂದೇ ಬಲವಾದ ಗುಂಪು ಇರುವಲ್ಲಿ ಯಾವುದೇ ಕಲೆಯಿರಲಿ, ಅದರ ಅಭಿವೃದ್ಧಿಗೆ ಒಳ್ಳೆಯ ಗತಿ ಬಂದಿದೆ ಎನ್ನಬಹುದು. ರಂಗದ ಪ್ರಗತಿ, ಅದರ ಬಹುಮುಖ ಅಭಿವೃದ್ಧಿ, ಮುಖ್ಯವಾಗಿ ಕಲಾವ್ಯವಸಾಯವನ್ನೇ ಅವಲಂಬಿಸಿದೆ, ನಿಜ. ಆದರೆ ಹವ್ಯಾಸೀ ಸಂಸ್ಥೆಗಳು ರಂಗದ ಪ್ರಗತಿಗೆ ಹೊಸದಾರಿ ನೀಡಬಲ್ಲವು, ಕಲೆಯಲ್ಲಿ ಹೊಸ ರಕ್ತ ತುಂಬಬಲ್ಲವು, ವ್ಯವಸಾಯೀ ಸಂಸ್ಥೆಗಳಲ್ಲಿ ಮನೆ ಮಾಡಿಕೊಂಡಿರುವ ದೋಷಗಳನ್ನು ದೂರಮಾಡಬಲ್ಲವು. ಇಂದು ಯಕ್ಷಗಾನ- ರಂಗಭೂಮಿಯ ಸ್ಥಿತಿಯನ್ನು ನೋಡಿದರೆ, ಹವ್ಯಾಸಿಗಳು ಮಾಡಬಹುದಾದದ್ದು ಸಾಕಷ್ಟು ಇದೆಯೆಂದು ಅನಿಸುತ್ತದೆ. ಆದರೆ ನಿಜವಾದ ಅರ್ಥದಲ್ಲಿ "ಅಮೆಚೂರ್ ರಂಗಭೂಮಿ” ಯಕ್ಷಗಾನದಲ್ಲಿ ಇನ್ನೂ ಕಾಣಿಸಿಕೊಂಡಿಲ್ಲ.
ಹವ್ಯಾಸೀ ಯಕ್ಷಗಾನ ಸಂಘಗಳು ಮಾಡಬಹುದಾದ ಕೆಲಸಗಳನ್ನು ಈ ರೀತಿಯಲ್ಲಿ ಸಂಗ್ರಹಿಸಬಹುದಾಗಿದೆ.
1 ನಿಯತಕಾಲಿಕವಾಗಿ “ತಾಳ ಮದ್ದಳೆಗಳನ್ನು ಏರ್ಪಡಿಸುವುದು, ಇದರಿಂದ ಅರ್ಥಗಾರಿಕೆ, ಭಾಗವತಿಗೆ ಹಾಗೂ ವಾದ್ಯವಾದನಗಳಿಗೆ ಯೋಗ್ಯ ತರಬೇತು ಸಿಗು ವುದು. ಇಂದಿನ ಕಲಾವಿದರಲ್ಲಿ ಒಂದು ಮುಖ್ಯ ಭಾಗವೆಂದರೆ ಇಂತಹ ಹವ್ಯಾಸೀ ಸಂಘಗಳಿಂದ ಬಂದದ್ದು, ಸಂಗೀತ, ನಾಟಕಗಳಲ್ಲಿ ಕೆಲಸ ಮಾಡುವ ಹವ್ಯಾಸಿಗಳಿಗೆ ಇಂತಹ ನಿಯಮಿತ ಅಭ್ಯಾಸಕೂಟ ಸೌಲಭ್ಯವಿಲ್ಲ.
2 ವರ್ಷಕ್ಕೆ ಒಂದೆರಡಾವರ್ತಿ ಕಲಾ ಪರಿಣತರಿಂದ 'ತಾಳಮದ್ದಳೆ ಹಾಗೂ ಬಯಲಾಟಗಳನ್ನು ಏರ್ಪಡಿಸುವುದು. ಇದರಿಂದ ಪರಿಸರದ ಜನರಿಗೆ ಒಳ್ಳೆಯ ಕಾರ್ಯಕ್ರಮಗಳನ್ನು ನೋಡುವ ಅವಕಾಶ ದೊರೆಯುವುದು.– 3 ಕೆಲವು ಸಂಸ್ಥೆಗಳು ಪ್ರತಿ ಮಳೆಗಾಲದಲ್ಲಿ ನೃತ್ಯ, ಚೆಂಡೆ, ಮದ್ದಳೆಗಳಲ್ಲಿ ಅಭ್ಯಾಸ ವರ್ಗಗಳನ್ನು ನಡೆಸುತ್ತವೆ.