ಈ ಪುಟವನ್ನು ಪ್ರಕಟಿಸಲಾಗಿದೆ



ಯಕ್ಷಗಾನ ಸಾಹಿತ್ಯ ಮಾಧ್ಯಮ
ಯಕ್ಷಗಾನ ಒಂದು ಸಿದ್ಧರಂಗಭೂಮಿ. ನಾಲ್ಕಾರು ಶತಮಾನಗಳ ಕಾಲ ಅದು ಬೆಳೆದು, ಕೆಲವು ಖಚಿತವಾದ ರೂಪರೇಷೆಗಳನ್ನೂ ಚೌಕಟ್ಟನ್ನೂ ಪಡೆದಿದೆ. ಹೀಗೆ ಯಕ್ಷಗಾನದ ಚಿತ್ರ, ಸಂಗೀತ, ಪ್ರಸಂಗ ರಚನೆ, ರಂಗತಂತ್ರ ಅಭಿವ್ಯಕ್ತಿಯ ವಿಧಾನ ಇವಕ್ಕೆ ಒಂದು ಸ್ವತಂತ್ರ ಭಾಷೆ' ಮತ್ತು ಆ ಭಾಷೆಗೆ ಒಂದು 'ವ್ಯಾಕರಣ' ಏರ್ಪಟ್ಟಿದೆ. ಗಾನ, ಹಿಮ್ಮೇಳ, ವೇಷ - ಇವುಗಳಲ್ಲಿ ಅಂತಹ ನಿಯಮ ಹೆಚ್ಚು ಬಿಗು ವಾದದ್ದು - ಏಕೆಂದರೆ ಈ ಮೂರು ಅಂಗಗಳು ಹೆಚ್ಚು ಶೈಲೀಕೃತ ( Stylised ) ಆಗಿ ನಿಂತಿದೆ, ಯಕ್ಷಗಾನದ ಯಕ್ಷಗಾನತ್ವ ಇರುವುದು ಇದರ ಸ್ವತಂತ್ರವಾದ, ಶ್ರೀಮಂತವಾದ, ಸಂಗೀತ, ವೇಷ, ನೃತ್ಯಗಳ ಶೈಲಿಯಲ್ಲಿ. ಯಕ್ಷಗಾನದ ಯಾವುದೇ ಅಂಗದಲ್ಲಿ, ಅಥವಾ ಒಟ್ಟಾಗಿ ಯಾವುದೇ ಪರಿಷ್ಕಾರಗಳನ್ನು, ಸೃಷ್ಟಿಶೀಲ ಪ್ರಯೋ ಗಗಳನ್ನು ಮಾಡುವವನಿಗೆ ಸಿದ್ಧರಂಗಭೂಮಿಯ ಪ್ರಜ್ಞೆಯೂ, ಅದರ ಅಂಗೋ ಪಾಂಗಗಳ ಸ್ವರೂಪದ ಜ್ಞಾನವೂ, ಅವುಗಳಲ್ಲಿ ವಿಸ್ತರಣದ ಸಾಧ್ಯತೆಯ ಬಗೆಗೆ ನೋಟವೂ ಇರಬೇಕಾಗುತ್ತದೆ.
ಕಲಾ ದೃಷ್ಟಿಯಿಂದಲೂ, ಒಟ್ಟು ಪರಿಣಾಮದ ದೃಷ್ಟಿಯಿಂದಲೂ ಯಕ್ಷ ಗಾನದ ಎಲ್ಲ ಅಂಗಗಳೂ ಸಮಾನ ಪ್ರಾಧಾನ್ಯವುಳ್ಳವು ನಿಜ, ಆದರೆ, ಸಂವಹನದ ದೃಷ್ಟಿಯಿಂದ, ಓರ್ವ ಪ್ರೇಕ್ಷಕನ ದೃಷ್ಟಿಯಿಂದ ಮಾತುಗಾರಿಕೆಗೆ ಮುಖ್ಯ ಸ್ಥಾನ ಆಟ, ಅದರ ಕತೆ, ವಸ್ತು, ಬೆಳವಣಿಗೆ ಇವು ಪ್ರೇಕ್ಷಕನಿಗೆ ಮುಟ್ಟುವುದು ಮಾತಿನ ಮೂಲಕವೇ ( ಈ ಮಾತನ್ನು ಒಂದು ಮಟ್ಟದಲ್ಲಿ ಗ್ರಹಿಸಬೇಕು. ) ಗೀತ, ಮಾತು ಇವುಗಳಿಂದಲೇ ಕೇಳುಗರನ್ನು ಮುಟ್ಟುವ ತಾಳ ಮದ್ದಳೆಯನ್ನು ಪರಿಭಾವಿಸಿದರೆ ಈ ಮಾತು ಸ್ಪಷ್ಟವಾಗುತ್ತದೆ. - [ ಹಾಗೇ ಮಾತಿಲ್ಲದೆ ಯಕ್ಷಗಾನದ ನೃತ್ಯ ನಾಟಕವೂ ಬೇರೆ ಒಂದು ಮಟ್ಟದಲ್ಲಿ ಸಫಲವಾಗುತ್ತದೆ. ] - ಯಕ್ಷಗಾನದ ಪ್ರಚಲಿತವಿರುವ, ಯಕ್ಷಗಾನದ್ದೇ • ಆದ ಪ್ರೇಕ್ಷಕರು ಇರುವಲ್ಲಿ ಯಕ್ಷಗಾನದ ಸಂವಹನದ ಯಶಸ್ಸು ಪ್ರಧಾನವಾಗಿ ಮಾತುಗಾರಿಕೆಯನ್ನೇ ಅವಲಂಬಿಸುತ್ತದೆ. ಭಾಷೆ ಎಂಬುದು ಹೆಚ್ಚು ಸರಳವಾದ, ಎಲ್ಲರನ್ನೂ ಮುಟ್ಟುವ ಮಾಧ್ಯಮವಾಗಿರುವುದು ಇದಕ್ಕೆ ಕಾರಣ,