ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊನೆಯ ದಾರಿ / ಮುಕ್ತಿ. ೧೨೩

ನಿಮಗಂತೂ,ಒಂದಿಷ್ಟು ದವಾಖಾನೀರೆ ಹೊಗಿಬರಿ."

       -ದವಾಖಾನೆಗೆಂದು ಹೊರಟಿದ್ದ ತಾನು.ಆದರೆ ಯಾಕೋ ದಾದರಿನಿಂದ ಹಾಗೇ ತಿರುಗಿ ಬರುವ ಮನಸ್ಸಾಗಿರಲಿಲ್ಲ.ಎತ್ತ ಕಡೆಗೋ ಚಿತ್ತ.ಎತ್ತ ಕಡೆಗೋ ಧ್ಯಾನ.ಹೋಗಿದ್ದು ಕೊನೆಗೆ ಜುಹು ಬೀಚಿಗೇ.
      ಎಲ್ಲೋ ಏನೋ ತಪ್ಪಿದಂತೆನಿಸುತ್ತಿದೆ ತನ್ನ ಜೀವನದಲ್ಲಿ.ಈ ಸಂಸಾರದ ತಾಪತ್ರಯ, ಹೆಂಡತಿ, ಮಕ್ಕಳು, ಆಫೀಸು,ಕೆಲಸ,ಮುಂಬಯಿಯ ಯಾಂತ್ರಿಕತೆ-ಯಾರಿಗೂ ಬಿಟ್ಟಿದ್ದಲ್ಲ.ಇದರಲ್ಲಿ ಹೊಸದಾಗಿ ಕೆಡುಕನಿಸಿಕೊಳ್ಳುವಂಥದೇನೂ ಇಲ್ಲ.

ಆದರೂ ಯಾಕೋ ಒಂದು ನಮೂನೆ ಅತೃಪ್ತಿ, ಕಳವಳ.

        ಸುಮ್ಮನೆ ಹೊರಟಿದ್ದವನನ್ನು ಹೊಡೆದೆಬ್ಬಿಸಿದಂತಾಗಿತ್ತು ಎದುರಿಗೆ ನೋಡಿದಾಗ-ಮಂದ ಬೆಳದಿಂಗಳಲ್ಲಿ ಹಿಂದಿನಿಂದ ಅಜಂತಯ ಶಿಲಾಬಾಲಕಿಯ ಹಾಗೆ ಕಾ‌ಣುತಿದ್ದ ಚಂದೂಲಾಲ.
          ಹೊಟ್ಟೆಯಲ್ಲಿ ಚಿಟುಗು ಮುಳ್ಳು. ಹುಡುಗಿಯರನ್ನು ಮಳ್ಳು ಮಾಡುವ ಮಾತುಗಾರಿಕೆ,ಒಳ್ಳೆಯ ಕೆಲಸ,ಇನ್ನೂ  ಮದುವೆಯಲ್ಲ,ಇನ್ನೇನು ಬೇಕು? ಚೈನೀ ಹೊಡೆಯುತ್ತಿದ್ದಾನೆ ಮಗ.....
         ತನಗೆ ಶಾಕ್ ಆದದ್ದು ಆ ಹುಡುಗಿಯ ಗುರುತು ಸಿಕ್ಕಾಗ.ಗಾಳಿಯಲ್ಲಿ ತೇಲುತ್ತಿರುವಂತೆ ಅವನ ಭುಜಕ್ಕೆ ತಲೆಯಾನಿಸಿ ಹೊರಟಿದ್ದವಳು-ಕಲಾ,ತಮ್ಮ 

ಕಲಾ....

               ಆಫೀನಲ್ಲಿ ಅವರಿಬ್ಬರೂ ಪರಸ್ಪರರನ್ನು ನೋಡುತ್ತಿದ್ದ ಬಗೆ, ಇಪ್ಪತ್ತು ಸಲ ಅವಳನ್ನು ಒಳಗೆ ಕರೆ ಕಳಿಸುತ್ತಿದ್ದುದು,ಟೀ ತೆಗೆದುಕೊಳ್ಳುವ ಬಿಡುವಿನಲ್ಲಿ

ಅವರಿಬ್ಬರೂ ಒಂದೇ ಟೇಬಲ್ಲಿನಲ್ಲಿ ಕೂಡುತ್ತಿದ್ದುದು,ಆಫಿಸು ಮುಗಿದ ನಂತರ ಎಲ್ಲರನ್ನೂ ತಪ್ಪಿಸಿ ಇಬ್ಬರೇ ಒಟ್ಟಾಗಿ ಹೊರಡುತ್ತಿದ್ದುದು,ಮನೆಗೆ ತಡವಾಗಿ ಬಂದುದಕ್ಕಾಗಿ ಹೊಲಿಗೆ ಕ್ಲಾಸಿನ ನೆವ- ಎಲ್ಲದರ ಅರ್ಥ ಒಮ್ಮೆಲೇ ನೂರು ಬಣ್ಣಗಳಲ್ಲಿ ಹೊಳೆದಿತ್ತು ತನಗೆ ಆ ಕ್ಷಣದಲ್ಲಿ.

                        * * *

'ನಾ ನಿಮ್ಮ ಕಲಾನ ಖರೇನ ಪ್ರೀತಿ ಮಾಡ್ತೀನಿ ಶಂಕರಮಾಮ,ಅಕೀನ್ನ ಲಗ್ನಾ ಮಾಡಿಕೊಳ್ಳಿಕ್ಕೆ ತಯಾರಿದ್ದೀನಿ.ಜಾತಿ ಬ್ಯಾರೇ ಆದರೂ ನೀವು ದೊಡ್ಡ ಮನಸ್ಸಿನಿಂದ ಒಪ್ಪತೀರಿ ಅಂತ ಗೊತ್ತದ ನನಗ'-ಅಂದದ್ದ ಚಂದೂಲಾಲ. 'ನಾ ಚಂದೂಲಾಲನ್ನ ಬಿಟ್ಟು ಬದುಕಲಿಕ್ಕೇ ಶಕ್ಯ ಇಲ್ಲ'-ಅಂದಿದ್ದಳು ಕಲಾ.