ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊನೆಯ ದಾರಿ / ಹೊರಟು ಹೋದವನು.


ಈ ಕೊನೆ ಮೊದಲಿಲ್ಲದ ಅತೃಪ್ತಿ-ಅಶಾಂತಿ ಇಲ್ಲದಂತಾಗುವುದು- ನಡುವೆ ಎಲ್ಲೋ
ಒಂದು ಇಪ್ಪತ್ತು ನಿಮಿಷ....

      -'ಬಾಯಿಸಾಬ್ಕೊ  ಖಾನಾ ಲಾವ್ಞೂ?'
ಇದೇನು ಲೋಂಡಾ ಬಂದೇ ಬಿಟ್ಟಿತೇ ಎಂದು ತಟ್ಟನೆ ಎದ್ದಳು ಆಕೆ. ಇಲ್ಲ
ಇನ್ನೂ ಮಧ್ಯ ರಾತ್ರಿ. ಲೋಂಡಾ ಬರುವುದು ಮಧ್ಯಾಹ್ನ. ಹಾಗಾದರೆ ಈ ಧ್ವನಿ? ಹನ್ನೆರಡು ವರ್ಷಗಳಿಂದ ಪರಿಚಿತವಾಗಿದ್ದ ಧ್ವನಿ.
ತಾನು ಹುಬ್ಬಳ್ಳಿಗೆ ಪ್ರತಿಸಲ
ಹೋಗುವಾಗೊಮ್ಮೆ ತಿರುಗಿ ಬರುವಾಗೊಮ್ಮೆ ತಪ್ಪದೆ ಕೇಳಿಬರುತ್ತಿದ್ದ ಧ್ವನಿ.
-ಅವನೊಬ್ಬ ಮಿಠಾಯಿ ಮಾರುವ ಮನುಷ್ಯ. ಲೋಂಡಾ ಸ್ಟೇಷನ್ ಮೇಲೆ
ಪ್ರತಿ ಟ್ರೇನು ಬಂದಾಗ ಪ್ಲ್ಯಾಟ್ ಫಾರ್ಮಿನ ಈ ಕೊನೆಯಿಂದ ಆ ಕೊನೆಯವರೆಗೆ
ಮಿಠಾಯಿಯ ಗಾಡಿಯನ್ನು ನೂಕಿಕೊಂಡು ಹೋಗಿ ಮಾರುವ ಮನುಷ್ಯ. ಊಟದ
ಹೋಟೆಲಿನಿಂದ ಊಟ ತಂದುಕೊಡುವುದೇನೂ ಅವನ ಕೆಲಸವಲ್ಲ. ಆದರೂ ಪ್ರತಿಸಲ
ಈ ದಾರಿಯಲ್ಲಿ ಬಂದಾಗ ಅವನು ಬಂದು ಹಾಜರಾಗುತ್ತಾನೆ; ಹೋಟೆಲಿನಿಂದ ಊಟ
ತಂದು ಕೊಡುತ್ತಾನೆ; ಒಳ್ಳೆಯ ಮಿಠಾಯಿ ಕೊಡುತ್ತಾನೆ; ತಾನು ಊಟ
ಮಾಡುತ್ತಿರುವಷ್ಟು ಸಮಯವೂ ವಿನಯದಿಂದ ಪಕ್ಕದಲ್ಲಿ ನಿಂತಿರುತ್ತಾನೆ; ಬಿಲ್ಲು
ಕೊಟ್ಟಾಗ ಬಾಗಿ ಸ್ವೀಕರಿಸಿ ಸಲಾಮ್ ಮಾಡುತ್ತಾನೆ; ಟ್ರೇನು ಹೊರಟಾಗ
ಪ್ಲ್ಯಾಟ್ ಫಾರ್ಮಿನ ಕೊನೆಗೆ ನಿಂತು ಮರೆಯಾಗುವವರೆಗೂ ಕೈ ಬೀಸುತ್ತಾನೆ.....
ತನ್ನ ಜೊತೆ ಮಕ್ಕಳು ಯಾರಾದರೂ ಬಂದಿದ್ದರೆ ಅವರೂ ಹುರುಪಿನಿಂದ
ಕಿಡಕಿಯೊಳಗೆ ಮುಖ ಹಾಕಿ ಅವನು ಕಾಣುತ್ತಿರುವವರೆಗೂ ತಿರುಗಿ ಕೈ ಬೀಸುತ್ತಾರೆ.
'ಈ ಮಿಠಾಯಿವಾಲಾ ನೋಡು ಸ್ವಲ್ಪೂ ಬದಲಾಗಿಲ್ಲ. ನಮ್ಮ ಲಗ್ನಾದ
ಹೊಸದಾಗಿ ಹ್ಯಾಂಗಿದ್ನೋ ಈಗೂ ಹಾಂಗಽ ಕಾಣಸ್ತಾನ ಅಲ್ಲಽ?'ಅಂದಿದ್ದ ಒಮ್ಮೆ
ಸತೀಶ.
ಹೌದು. ತನ್ನ ಲಗ್ನವಾದ ನಂತರ ಮೊದಲ ಸಲ ಸತೀಶನೊಂದಿಗೆ
ಹುಬ್ಬಳ್ಳಿಯಿಂದ ಪೂನಾಕ್ಕೆ ಹೊರಟಾಗ, ಹನ್ನೆರಡು ವರ್ಷಗಳ ಹಿಂದೆ, ಲೋಂಡಾ
ಸ್ಟೇಷನ್ ಮೇಲೆ ಇವನನ್ನು ಮೊದಲು ನೋಡಿದ್ದು. ಟ್ರೇನಿನಲ್ಲಿ ಫರ್ಸ್ಟ್ ಕ್ಲಾಸ್
ಕಂಪಾರ್ಟಮೆಂಟಿನಲ್ಲಿ ತನ್ನನ್ನು ಒತ್ತರಿಸಿ ಕೂತಿದ್ದ ಸತೀಶನ ಕೈ-ಬಾಯಿ ಎರಡಕ್ಕೂ
ಪುರಸೊತ್ತಿರಲಿಲ್ಲ. ತನಗೋ ಒಂದು ಬಗೆಯ ಮಂಪರು. ಸಾವಿನಷ್ಟು ಶೀತಲವಾದ
ನಿರ್ಲಿಪ್ತ ಮಂಪರು. ದಣಿದು ಮಲಗಿ ಗಾಢ ನಿದ್ರೆಯಲ್ಲಿದ್ದಾಗ ಮೈ ಜುಮ್ಮೆನ್ನಿಸುವ
ಅಂಜಿಕೆ ಬರಿಸುವ ಕನಸು ಕಂಡು ಬೆಚ್ಚಿ ಎಚ್ಚತ್ತಂತಾಗಿತ್ತು ಲೋಂಡಾ ಸ್ಟೇಷನ್ ಮೇಲೆ
ಈ ಮಿಠಾಯಿವಾಲಾನನ್ನು ನೋಡಿದಾಗ.