ಈ ಪುಟವನ್ನು ಪರಿಶೀಲಿಸಲಾಗಿದೆ

೪೯೫

ಸಮಾಧಾನ

ಆ ತಾಲೂಕಿನಲ್ಲಿ ಕೆಲವರ್ಷಗಳ ಹಿಂದೆಯಷ್ಟೆ ಶುರುವಾಗಿದ್ದ ಸರಕಾರಿ
ಹೈಸ್ಕೂಲಿಗೆ ವರ್ಗವಾಗಿ ಅವಳು ಬಂದಿದ್ದಳು. “ಹೊಸ ಊರು. ಬಸ್‌ ಪ್ರವಾಸ. ಎಲ್ಲ
ಹೇಗೋ ಏನೋ. ಒಂದು ತಿಂಗಳು ರಜಾ ಹಾಕು. ಅಷ್ಟರಲ್ಲಿ ನನ್ನದೂ ಟ್ರಾನ್ಸ್‌ಫರ್‌
ಆರ್ಡರ್‌ ಬರುತ್ತದೆ. ಇಬ್ಬರೂ ಕೂಡಿಯೇ ಹೋಗೋಣ..." ಅಂತ ಬಹಳ ಹೇಳಿದ್ದ
ಅವಳ ಗಂಡ. ಅವಳು ಕೇಳಿರಲಿಲ್ಲ ; ಹೇಗೂ ಮಾವಶಿ ಅದೇ ಊರಲ್ಲಿದ್ದಾಳೆ. ಅವಳ
ಮನೆಯೂ ದೊಡ್ಡದಿದೆ. ಅದರಲ್ಲೇ ಮೂರು ರೂಮ್ಸು ಕೊಡುವೆನೆಂದು ಹೇಳಿಯೇ
ಬಿಟ್ಟಿದ್ದಾಳಲ್ಲ. ಸುಮ್ಮನೆ ರಜಾ ಹಾಳು ಮಾಡುವುದೇಕೆ ? ನಾನು ಹೋಗುತ್ತೇನೆ.
ನೀವು ನಿಮ್ಮ ಆರ್ಡರು ತಗೊಂಡೇ ಬರ್‍ರಿ. ನನ್ನ ಸಲುವಾಗಿ ಕಾಳಜಿ ಬೇಡ -ಅಂತ
ಹೇಳಿ ಎರಡು ಸೂಟ್‌ಕೇಸ್‌ ತಗೊಂಡು ಹೊರಟು ಬಂದೇಬಿಟ್ಟಿದ್ದಳು. "ಜೋಕೆಯಿಂದ
ಹೋಗು ರಜನೀ, ಹೋದಕೂಡಲೇ ಟೆಲಿಗ್ರಾಮ್‌ ಕೊಡು. ದಿನಾ ಪತ್ರ ಬರೆ" -ಅಂತ
ತಾಕೀತು ಮಾಡಿ ಕಳಿಸಿದ್ದ ಆತ.

ಅಲ್ಲ, ತಾನೇನು ಸಣ್ಣ ಹುಡುಗಿಯೆ ? ಅಥವಾ ತಿಳಿವಳಿಕೆಯಿಲ್ಲದ,
ಅಂಜುಬುರುಕ, ಕೈಲಾಗದ, ಅವಲಂಬೀ ಹೆಂಗಸೆ ? ಗಂಡನಿಲ್ಲದೆ ಪರಊರಲ್ಲಿ, ಅದೂ
ಮಾವಶಿಯ ಮನೆಯಿರುವ, ಅಷ್ಟು ದೊಡ್ಡದೂ ಅಲ್ಲದ ಇಂಥ ಊರಲ್ಲಿ, ಒಂದು
ತಿಂಗಳ ಮಟ್ಟಿಗೆ ಒಬ್ಬಳೇ ಇರುವುದು ತನಗೆ ಆಗುವುದಿಲ್ಲವೆ ? ಗಂಡ-ಹೆಂಡತಿ
ಇಬ್ಬರೂ ನೌಕರಿಯಲ್ಲಿದ್ದಾಗ ಇಂಥ ಪ್ರಸಂಗಗಳು ಆಗಾಗ ಬರತಕ್ಕವೇ. ತನ್ನ ಗಂಡ
ಬಹಳ ಸೆಂಟಿಮೆಂಟಲ್‌ ಅನಿಸಿತು ಅವಳಿಗೆ.

ಹಾಗೆ ನೋಡಿದರೆ ಲಗ್ನವಾದ ನಂತರದ ಇಡೀ ಎರಡು ವರ್ಷ ಆತ
ಅವಳನ್ನೆಂದೂ ಒಬ್ಬಳನ್ನೇ ಎಲ್ಲಿಯೂ ಕಳಿಸಿರಲಿಲ್ಲ. ಈ ಸ್ವಾತಂತ್ರ್ಯ, ಬಹಳ ದಿನಗಳ
ನಂತರ ಹೀಗೆ ಯಾವ ಎಗ್ಗಿಲ್ಲದೆ ದಾರಿಯಲ್ಲಿ ಬೇಕಾದ ಕಡೆ ನೋಡುತ್ತ ನಡೆಯುವ
ಸ್ವಾತಂತ್ರ್ಯ ಅವಳಿಗೆ ಪ್ರಿಯವೆನಿಸುತ್ತಿದೆ. ಹಳೆಯ ಸಾಹಸಗಳ ನೆನಪಾಗುತ್ತಿದೆ. ಈಗ
ಮತ್ತೆ ಸಾಮರ್ಥ್ಯ ಪರೀಕ್ಷೆ ಮಾಡಿಕೊಳ್ಳಬಾರದೆಕೆ ಅನಿಸುತ್ತಿದೆ. ಒಂದು ಥರಾ ಸುಖೀ
ಆತ್ಮವಿಶ್ವಾಸದ ಅನುಭವವಾಗುತ್ತಿದೆ.