ಈ ಪುಟವನ್ನು ಪರಿಶೀಲಿಸಲಾಗಿದೆ

 ರೋಹಿಣಿ

                                    ಪ್ರಥಮಲಹರಿ. 
                                   ದಿಕ್ಕಿಲ್ಲದ ಮಗು.


ಹಿಮಗಾಲದಲ್ಲೊಂದುದಿನ ಕರುಣಾಕರನು ಕಲ್ಯಾಣನಗರದಲ್ಲಿದ್ದ ತನ್ನ ಅಕ್ಕನನ್ನು ನೋಡಲು ಅಶ್ವಾರೂಢನಾಗಿ ಹೊರಟನು. ಆಗ ಸಂಧ್ಯಾಕಾಲವಾಗಿದ್ದಿತು. ಹಿಮವು ಅವಿರಳವಾಗಿ ಸುರಿಯುತ್ತಿದ್ದಿತು. ಹಿಮದ ಸರ್ವ ವ್ಯಾಪಕತೆಯಿಂದ, ಇದು ಮಾರ್ಗ, ಇದು ಹಳ್ಳ, ಇದು ದಿಣ್ಣೆ, ಇದು ಮೈದಾನವೆಂಬುದೊಂದೂ ಗೋಚರವಾಗುತ್ತಿರಲಿಲ್ಲ. ಆದರೆ ಕರುಣಾಕರನ ಅಶ್ವವು ಎಂತಹ ಮಾರ್ಗದಲ್ಲಿ ಹೋಗುವುದಕ್ಕೂ ಅಂಜುತ್ತಿರಲಿಲ್ಲ. ಈ ಅಶ್ವದ ಬಲದಿಂದಲೇ ಮಾರ್ಗವು ದುರ್ಗಮವೆಂದು ಸಹ ಲಕ್ಷಿಸದೆ ಕರುಣಾಕರನು ಸೋದರಿಯನ್ನು ನೋಡಲು ಹೊರಟಿದ್ದನು. ಅಶ್ವವು ಸ ಬುದ್ದಿ ಕೌಶಲದಿಂದ ಅನೇಕ ಕಷ್ಟಗಳನ್ನನುಭವಿಸುತ್ತಾ ಮಾರ್ಗ ಕ್ರಮಣ ಮಾಡತೊಡಗಿತು. ಅಷ್ಟರಲ್ಲೇ ಅಂಧಕಾರವು ಸರ್ವತ್ರವ್ಯಾಪಿಸಿತು. ಇಂತಹ ರಾತಿಯಲ್ಲಿ -ನಿಬಿಡವಾದ ಹಿಮವರ್ಷಣದಲ್ಲಿ -ಕುದುರೆಯು ಕಲ್ಯಾಣ ನಗರದ ಉದ್ಯಾನವೊಂದರ ಸಮೀಪದಲ್ಲಿ ಬರುತ್ತಿರುವಾಗ ಕರುಣಾಕರನಿಗೆ ಒಂದು ಶಿಶುವಿನ ರೋದನ ಧ್ವನಿಯು ಕೇಳಿಸಿತು. ತಕ್ಷಣವೇ ಅವನು ಅಶ್ವದಿಂದಿಳಿದು ಆಲಿಸಿ ಕೇಳಲು ಪ್ರಚಂಡಮಾರುತರವವಲ್ಲದೆ ಮತ್ತೇನೂ ಕೇಳಲಿಲ್ಲ. ಪುನಹ ಕುದುರೆಯನ್ನು ಹತ್ತಿ ಮುಂದುವರಿಯುತ್ತಿರುವಲ್ಲಿ ಕುದುರೆಯು ಥಟ್ಟನೆ ಒಂದುಕಡೆ ನಿಂತು ಬಿಟ್ಟಿತು. ಏನು ಮಾಡಿದರೂ ಮುಂದರಿಯಲೇ ಇಲ್ಲ. ಆಗ ಕರುಣಾಕರನು ಪುನಹ ಇಳಿದು ಸುತ್ತಲೂ ನೋಡಿದನಾದರೂ ಆ ಕತ್ತಲೆಯಲ್ಲೇನೂ ಕಾಣಬರಲಿಲ್ಲ. ಆದರೂ ಬಿಡದೇ ಶೋಧಿಸತೊಡಗಲು ಕುದುರೆಯ ಮುಂಗಡೆ ಹಿಮವ್ಯಾಪ್ತವಾದೊಂದು ಪ್ರದೇಶದಲ್ಲಿ ಏನೋ ಬಿದ್ದಿರುವಂತೆ ಬೋಧೆಯಾಯಿತು. ಕರುಣಾಕರನು ಪರಿಶೀಲಿಸಲು ಅವನಿಗೊಂದು ಎಳೆಯ ಮಗುವು ದೃಗ್ಗೋಚರವಾಯಿತು. ಅವನು ಅದನ್ನು ಎರಡು ಕೈಗಳಿ೦ದಲೂ ಎತ್ತಿ ನೋಡಲು ಜೀವವಿರುವುದೆಂದು ತಿಳಿಯಿತು.