18 ಕಾದಂಬರಿ? ಸಂಗ್ರಹ ಕರೆವುದಕ್ಕೆ ಬಂದರು. ಲೋಕಾಚಾರಕ್ರಮವಾಗಿ ನಮ್ಮ ತಾತನವರೂ, ನನ್ನನ್ನು ತೌರುಮನೆಗೆ ಪ್ರಯಾಣಮಾಡಿಸಿ ಕಳುಹಿಸಿಕೊಟ್ಟರು. ನನಗೇನೋ ತೌರುಮನೆಗೆ ಹೋಗುವೆನೆಂಬ ಸಂತೋಷವು ಪೂರ್ಣವಾಗಿದ್ದಿತಾದರೂ ಪತಿದೇವನನ್ನು ಅಗಲಿ ಇರಬೇಕಾಗುವುದಲ್ಲಾ, ಎಂಬ ಚಿಂತೆಯೊಂದು ನನ್ನ ಮನಸ್ಸಿನಲ್ಲಿ ಸ್ಥಾನಮಾಡಿಕೊಂಡಿದ್ದಿತು. ಇದಕ್ಕಾಗಿ ನಾನು ನನ್ನ ಸ್ವಾಮಿಯನ್ನು ರಂಗಪುರಕ್ಕೆ ಬಂದಿರಬೇಕೆಂದು ಪ್ರಾರ್ಥಿಸಿಕೊಂಡೆನು. ಅವರು ಅದಕ್ಕೆ ಒಪ್ಪಲಿಲ್ಲ. ಆಗಿಂದಾಗ್ಗೆ ರಂಗಪುರಕ್ಕೆ ಬರುತ್ತಿರುವೆನೆಂದು ಅವರು ಹೇಳಿದ ಮೇಲೆ ನನಗೆ ಮನಸ್ಸಮಾಧಾನವಾಯಿತು. ನಾನು ಸಂತೋಷದಿಂದ ತೌರುಮನೆಗೆ ಪ್ರಯಾಣಮಾಡಿದೆನು. ಅಲ್ಲಿ ನನ್ನ ತಾಯಿತಂದೆಗಳು ನನ್ನನ್ನು ಬಹು ಪ್ರೀತಿಯಿಂದ ಆದರಿಸುತ್ತಲೂ ನಾನು ಕೇಳಿದ್ದನ್ನು ತಂದುಕೊಡುತ್ತಲೂ ಇದ್ದರು. ಬಳೆ ತೊಡಿಸುವುದು, ಅಕ್ಷತೆ, ಸೀಮಂತ ಮುಂತಾದ ಕಲಾಪಗಳು ವಿಹಿತವಾಗಿ ನೆರವೇರಿದುವು. ಎಂಟು ತಿಂಗಳು ತುಂಬುತ್ತಿದ್ದ ಹಾಗೆಯೇ ನನಗೆ ಸುಂದರವಾದ ಒಂದು ಗಂಡು ಮಗುವು ಜನಿಸಿತು. ನಮ್ಮ ತಂದೆತಾಯಿಗಳ ಆನಂದಕ್ಕೆ ಪಾರವೇ ಇಲ್ಲ. ನನಗೋಸ್ಕರ-ನನ್ನ ಸುಖಕ್ಕೋಸ್ಕರ-ನನ್ನ ಆರೋಗ್ಯಕ್ಕೋಸ್ಕರ ನೂರಾರು ರೂಪಾಯಿಗಳನ್ನು ವೆಚ್ಚಮಾಡಿದರು. ಈ ಶಿಶುಜನನವಿಚಾರವನ್ನು ಹರಪುರಕ್ಕೆ ತಿಳಿಸಿದಮೇಲೆ ಅಲ್ಲಿ ನಮ್ಮ ಮನೆಯವರು ತುಂಬಾ ಸಂತೋಷಪಟ್ಟು ಕೊಂಡರು. ಮತ್ತು ಬಹು ದ್ರವ್ಯವ್ಯಯದಿಂದ, ಜಾತಕರ್ಮ ನಾಮಕರಣಾದಿಗಳು ನೆರವೇರಿಸಲ್ಪಟ್ಟುವು.ಆದರೆ ಮಗುವು ಎರಡು ಮೂರು ದಿನ ಹಾಲನ್ನೇ ಕುಡಿಯಲಿಲ್ಲ. ಮನೆಯವರು ಬಹು ಗಾಬರಿಪಟ್ಟು ಏನೇನೋ ಔಷಧಿಗಳನ್ನೂ, ಸುವಾಸಿನೀ ಪ್ರಾರ್ಥನೆಯನ್ನೂ ಮಾಡಿದ ಮೇಲೆ ಮಗುವು ಸ್ವಸ್ಥವಾಗಿ ಆಡಿಕೊಂಡಿದ್ದಿತು.
ನಾನು ಬಾಣಂತಿಯಾಗಿದ್ದಾಗ ನನ್ನ ತೌರುಮನೆಯಲ್ಲಿ ಅನೇಕ ಅನರ್ಥಗಳು ನಡೆದುಹೋದುವು. ಏನೆಂದರೆ ನಾನು ಎರಡು ತಿಂಗಳ ಬಾಣಂತಿಯಾಗಿದ್ದಾಗ ನನಗೆ ಜ್ವರಛಳಿಗಳು ಬರುವುದಕ್ಕೆ ಆರಂಭವಾಗಿ ಅನ್ನವೇ ಸೇರದೆ ಸುಸ್ತಾಗಿ ಮಲಗಿಬಿಡುತ್ತಿದ್ದೆನು. ಮಗುವಿಗೂ ಆಗಿಂದಾಗ್ಗೆ ಆಲಸ್ಯವಾಗುತ್ತಲೇ ಇತ್ತು. ಮಗುವಿಗೆ ಆಲಸ್ಯ ವಾದಾಗಲೆಲ್ಲಾ ನಮ್ಮ ತಾಯಿಯು ಚಿಟಿಕಿಯನ್ನು ಹಾಕುತ್ತಿದ್ದರು. ನನಗೆ ಬಾಣಂತಿಯಲ್ಲಿ ಪ್ರಾಪ್ತವಾಗುತ್ತಿದ್ದ ಕಾಹಿಲೆಗಳನ್ನು ನೋಡಿ ಮೂಢರಾದ ನಮ್ಮ ತಂದೆತಾಯಿಗಳು ಇದು ದೈವದ ಕಾಟವೆಂದೂ ಸವತಿಯರು ಈ ರೀತಿ ಕಾಡುತ್ತಿದಾರೆಂದೂ ನಿರ್ಧರಿಸಿಬಿಟ್ಟರು. ಇವರ ಈ ಊಹೆಯು ನನಗೆ ಬಹು ಕಷ್ಟಕ್ಕೆ ಕಾರಣವಾಯಿತು. ಬೆಳಗೆದ್ದರೆ, ಆ ಮಂತ್ರವಾದಿ, ಈ ಮಂತ್ರವಾದಿ, ಈ ಔಷಧ, ಆ ವೈದ್ಯ, ಈ ದೇವರ