ಈ ಪುಟವನ್ನು ಪ್ರಕಟಿಸಲಾಗಿದೆ



ನವೋದಯ

331

ಆಗ ಬಾಗಿಲಲ್ಲೆ ಇದ್ದ ಸುನಂದಾ "ಮೇಸ್ಟ್ರು ಬಂದ್ರು!" ಎಂದು ಕೈ ತಟ್ಟಿ ನಕ್ಕು,
ಒಳಕ್ಕೆ ನುಸುಳಿದಳು. ಪುನಃ ಹೊರಬರುವುದು ಬಹಳ ತಡವಾಯಿತು.
"ಬಾ ಜಯಣ್ಣ. ಚೆನ್ನಾಗಿದೀಯೇನಪ್ಪ?"ಎಂದು ಸುಖದುಃಖ ವಿಚಾರಿಸಿ
ದವರು ಸುನಂದೆಯ ತಾಯಿ. ಕಣ್ಣೆದುರಲ್ಲೆ ಇದ್ದ ಹುಡುಗ, ಪ್ರಪಂಚ ಪರ್ಯಟನ
ಮಾಡಿ ಮರಳಿದ ಹಾಗಿತ್ತು, ಅವರ ದೃಷ್ಟಿಯಲ್ಲಿ.
"ಚೆನ್ನಾಗಿದೀನಮ್ಮ."
ಇಷ್ಟರ ಮಟ್ಟಿಗಿದೀನಮ್ಮ-ಎನ್ನುವ ಉತ್ತರ ಜಯದೇವನಿಗೆ ಇಷ್ಟವಿರಲಿಲ್ಲ.
ಆದರೆ 'ಅಮ್ಮ' ಎಂದಾಗ ಮಾತ್ರ ನಾಲಗೆ ಸ್ವಲ್ಪ ತಡವರಿಸಿತು. 'ಅಮ್ಮ' ಎಂಬ
ಸಂಬೋಧನೆಯೇ ರೂಢಿಯಾಗಿದ್ದರೂ 'ಅತ್ತೆ' ಎನ್ನುವ ಬಯಕೆಯಾಗಿತ್ತು ಆತನಿಗೆ.
ತಾಯಿ, ಮಗಳು ಕಾಣಿಸದೆ ಇದ್ದುದನ್ನು ಗಮನಿಸಿದರು.
"ಸುನಂದಾ, ಎಲ್ಲಿದೀಯೇ? ಎಲ್ಲಿಲ್ಲದ ನಾಚಿಕೆ ಅದೇನು ಬಂತೊ ಈಗ?"
ಆ ಮಾತು ಜಯದೇವನಿಗೆ ಪ್ರಿಯವೆನಿಸಿತು. ಸುನಂದಾ ಹಿಂದೆಂದೂ ತನ್ನೆದು
ರಿಗೆ ನಾಚಿದವಳಲ್ಲ. ಈಗಿನ ನಾಚಿಕೆಗೆ ಕಾರಣ?
ತಾಯಿ ಮತ್ತೊಮ್ಮೆ ಮಗಳನ್ನು ಕರೆದರು:
“ಏ ಸುನಂದಾ!”
ಒಳಗಿನಿಂದ ಸ್ವರ ಕೇಳಿಸಿತು:
"ಕಾಫಿಗೆ ನೀರಿಡ್ತಿದೀನಿ ಅಮ್ಮ."
ಇಂಪಾಗಿತ್ತು ಆ ಸ್ವರ.
ಸುನಂದೆಯ ತಾಯಿ ಜಯದೇವನನ್ನು ಕುರಿತು ಹೇಳಿದಳು:
“ಯಾವಾಗ ಬರ್ತೀನಿ ಅಂತ ಸ್ಪಷ್ಟವಾಗಿ ಬರೀಬಾರದಾಗಿತ್ತಾ?"
[ತಿಳಿಸದೆ ಬಂದ ಅಳಿಯನ ವಿಷಯವಾಗಿ ಆಕ್ಷೇಪವೇನೋ!]
"ಕಾಗದ ಬರೆಯೋಕೆ ಪುರಸೊತ್ತೇ ಇರ್ಲ್ಲಿಲ್ಲ ಅಮ್ಮ. ಹೊರಡೋಕ್ಮುಂಚೆ
ಅಷ್ಟೊಂದು ಕೆಲಸ ಇತ್ತು."
“ಅದೇನು ಕೆಲಸವೊ! ತುಂಬಾ ಇಳಿದ್ಹೋಗಿದೀಯಪ್ಪ. ಕೆಟ್ಟ ಹೋಟ್ಲೂಟ
ದಿಂದ್ಲೇ ಹೀಗಾಗಿರಬೇಕು."
ಹೆತ್ತ ತಾಯಿಯ ಬದಲು ಬೇರೊಂದು ಹೆಂಗಸು ಹೇಳಿದ್ದ ಮಾತು. ಆದರೂ
ಪರಿಣಾಮ ಅಂತಹದೇ. ಮಧುರ ಯಾತನೆಯ ನೆನಪುಗಳು ಆತನನ್ನುಕಾಡಿದುವು.
ಗಂಟಲು ಒತ್ತರಿಸಿ ಬಂತು. ಮಾತಿಗಿಂತ ಮೌನವೇ ಲೇಸೆನಿಸಿತು.
ಜಯದೇವ ಸುಮ್ಮನಿದ್ದುದನ್ನು ಕಂಡು ಆಕೆಯೇ ಅಂದರು:
"ಹಾಸಿಗೆ ಟ್ರಂಕು ಕೊಠಡೀಲಿ ಇಡು. ಕೈಕಾಲು ಮುಖ ತೊಳ್ಕೊ. ಆಮೇಲೆ
ಸ್ನಾನ ಮಾಡುವಿಯಂತೆ."
"ಹೂಂ."