ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

485

"ವಾಪಸು ಬಂದ್ಮೇಲೆ ಪಾಠ ಶುರುಮಾಡೋಣ," ಎಂದಳು ಸುನಂದಾ.
ಆಕೆಯ ಕೈಯನ್ನು ತನ್ನ ಅ೦ಗೈಗಳಲ್ಲಿ ಇರಿಸಿಕೊಳ್ಳುತ್ತಾ ಇಂದಿರೆಯ ತಾಯಿ
ನಗುತ್ತ ಅಂದರು:
"ವಾಪಸು ಬಂದ್ಮೇಲೆ ನಿನಗೆ ಪುರಸೊತ್ತೆಲ್ಲಿರುತ್ತೋ?"
"ಹೋಗ್ರಿ. ನೀವೂ ತಮಾಷೆ ಮಾಡ್ತೀರಾ!" ಎಂದು ಸುನಂದಾ ಹುಸಿ ಮುನಿಸು
ತೋರಿದಳು.
ಜಯದೇವನಿಗೆ ಹೊಳೆದ ಉಪಾಯವೊಂದೇ:
"ನಾನು ಒಂದು ಹೇಳ್ಲೇನು? ನಂಜುಂಡಯ್ಯ ಇಂದಿರೆಗೆ ಪಾಠ ಹೇಳಿದರೆ
ಯಾವ ತೊಂದರೆಯೂ ಇರೋದಿಲ್ಲ. ಉಳಿದದ್ದೆಲ್ಲಾ ಏನೇ ಇರ್‍ಲಿ, ಅವರು ಕಟ್ಟು
ನಿಟ್ಟಿನ ಮನುಷ್ಯ. ಅಷ್ಟು ಭರವಸೆ ಕೊಡಬಲ್ಲೆ. ಅವರ ಹೆಂಡತೀನೂ ಒಳ್ಳೆಯ
ವರು. ವಾರಕ್ಕೆ ಮೂರು ಸಲ ಅವರ ಮನೆಗೇ ಹೋಗಿ ಪಾಠ ಹೇಳಿಸ್ಕೊಂಡರಾಯ್ತು."
ಅಷ್ಟಾದರೆ ಅಷ್ಟು ಎನ್ನುವ ಧ್ವನಿಯಲ್ಲಿ ಇಂದಿರೆಯ ತಾಯಿ ಅಂದರು:
"ಆಗಬಹುದು. ಅವರನ್ನು ಒಪ್ಪಿಸೋ ಜವಾಬ್ದಾರಿ ನಿಮ್ಮದು. ನೀವು
ಹೇಳಿದ ಫೀಸು ಕೊಡ್ತೀವಿ."
"ಫೀಸಿಗೇನು? ಹತ್ತು ರೂಪಾಯಿ ಕೊಟ್ಟರೆ ಸಾಕು."
"ಆಗಲಿ."
ತಾಯಿ_ಮಗಳು ಹೊರಟು ನಿಂತಾಗ ಜಯದೇವನತ್ತ ತಿರುಗಿ ಇಂದಿರಾ
ಹೇಳಿದಳು:
"ನೀವು ಬೆಂಗಳೂರಿಗೆ ಹೋಗುವಾಗ ಅಕ್ಕನ ವಿಳಾಸ ಕೊಡ್ತೀನೀಂತ ಚೂಡಾ
ಹೇಳಿದ್ಲಂತೆ. ಆದರೆ, ಪಬ್ಲಿಕ್ ಪರೀಕ್ಷೆ ಮುಗಿದ ತಕ್ಷಣ ಊರಿಗೆ ಬಂದ್ಬಿಡ್ತೀನೀಂತ
ಪ್ರಭಾ ಬರೆದಿದಾಳೆ."
"ಹಾಗೇನು? ಅವಳು ಈ ವರ್ಷ ಎಸ್.ಎಸ್.ಎಲ್.ಸಿ.ಗೆ ಕಟ್ಟಿದಾಳೆ, ಅಲ್ವೆ?"
"ಹೌದು."
"ಸರೀನಮ್ಮ. ನೊಡೋಣ. ನಾವು ಹೊರಡೋದು ನಾಲ್ಕುದಿನ ತಡವಾದರೆ
ಪ್ರಭಾಮಣಿ ಇಲ್ಲಿಯೇ ಸಿಗ್ತಾಳೆ."
"ಹೂಂ. ಸಿಗಬಹುದು."
ಇಂದಿರಾ ಕುಂಕುಮವಿಟ್ಟುಕೊಂಡಳು. ತಾಯಿಯೊಡನೆ ಕೆಳಕ್ಕಿಳಿಯುತ್ತ, ತನ್ನ
ಷ್ಟಕ್ಕೆ ನಗುತ್ತ, ಸುನಂದೆಯ ಕಡೆ ನೋಡಿ ಆಕೆ ಅಂದಳು:
"ಹೋಗ್ಬರ್‍ತೀನಿ. ನಮಸ್ಕಾರ ಟೀಚ!"
"ಕೆಟ್ಟ ಹುಡುಗಿ!" ಎಂದಳು ಸುನಂದಾ, ಸಂತಸದ ದುಂಡು ಮಲ್ಲಿಗೆಯನ್ನು
ಅರಳಿಸುತ್ತ.
...ಇಂದಿರೆಗೆ ಪಾಠ ಹೇಳಿಕೊಡಲು ನಂಜುಂಡಯ್ಯ ಒಪ್ಪಿದರು: