ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

355

ಅವರ ಮನೇಲೆ ಇದ್ದು ಓದ್ತಿದಾನೆ."
"ಹಾಗೇನು?”
ನೀರು ಕಾದಿದೆ- ಎಂದು ವರದಿ ಕೊಟ್ಟಳು, ಹುಡುಗಿ ಬಂದು. ಚಾಪೆಯ
ಮೇಲೆ ಕುಳಿತಿದ್ದ ಜಯದೇವ ಸುನಂದೆಯರನ್ನು ಸಂಕೋಚ ಪಡುತ್ತ ಆಕೆ
ನೋಡಿದಳು.
“ಏಳಿ, ಸ್ನಾನಮಾಡಿ," ಎಂದರು ನಂಜುಂಡಯ್ಯ.
ಎಳ್ಳಿನಷ್ಟು ಸಂದೇಹವೂ ಇರಬಾರದೆಂದು ಅವರೇ ನಗುತ್ತ ಅಂದರು:
"ನಿಮ್ಮ ಹೆಂಡತಿಯನ್ನೂ ಇಷ್ಟರಲ್ಲೆ ನಿಮ್ಮ ಜಾತಿಗೆ ಸೇರಿಸ್ಕೊಂಡಿದೀರಿ ತಾನೆ?
ಊಟ ಉಪಚಾರ... "
ಸುನಂದೆಗೆ ಅದರ ಅರ್ಥ ಹೊಳೆಯುವುದು ಅರೆಕ್ಷಣ ತಡವಾಯಿತು. ಜಯ
ದೇವ ಮಾತ್ರ ಅಂಗೈ ಬೀಸಿ ಅಂದ:
"ಓಹೋ! ಆ ವಿಷಯದಲ್ಲಿ ಯಾವ ಯೋಚ್ನೇನೂ ಮಾಡ್ಬೇಡಿ."
"ಕೇಳುವ ಅಗತ್ಯವೇ ಇರ್ಲಿಲ್ಲ. ನಿಮ್ಮ ಜೋಡಿ ನೋಡಿದರೆ ಗೊತ್ತಾಗೊಲ್ವೆ?
ಆದರೂ ಸಂಶಯ ಯಾತಕ್ಕೇಂತ__"
"ಸರಿ, ಸರಿ."
ಮನೆಯ ಯಜಮಾನಿತಿ ಬಾಗಿಲಬಳಿ ಕಾಣಿಸಿಕೊಂಡಳು.
"ನಿಮಗೆ ಕುಡಿಯೋಕೆ ನೀರು ಬೇಕೆ?"
ಗಂಡನಿಲ್ಲದೆ ಇದ್ದಾಗ ಸ್ಪಷ್ಟವಾಗಿ ಕೇಳಿಸುತ್ತಿದ್ದ ಸ್ವರ ಈಗ ಕ್ಷೀಣವಾಗಿತ್ತು.
“ಎಲಾ ಇವಳ! ಇನ್ನೂ ಕುಡಿಯೋಕೆ ನೀರು ಕೂಡಾ ಕೊಟ್ಟಿಲ್ವೇನು?"ಎಂದು
ನಂಜುಂಡಯ್ಯ ಗುಡುಗಿದರು.
"ನಾವು ಬರೋದಕ್ಕೂ ನೀವು ಬರೋದಕ್ಕೂ ಹೆಚ್ಚು ಕಡಮೆ ಸರಿ ಹೋಯ್ತು,"
ಎ೦ದು ಜಯದೇವ ಸಮಾಧಾನಪಡಿಸುವ ಮಾತನ್ನಾಡಿದ.
ಬಳಲಿದ ಸುನಂದೆಗೆ ನೀರು ಬೇಕಾಗಿತ್ತು. ಎರಡು ಲೋಟ ಕುಡಿದು ಆಕೆ
ದಣಿವಾರಿಸಿಕೊಂಡಳು.
ಸುನಂದೆ ಸ್ನಾನಕ್ಕೆ ಹೋದಬಳಿಕ ನಂಜುಂಡಯ್ಯ ಒಮ್ಮೆಲೆ ಅಂದರು:
"ನಾನು ಕೇಳೋದು ಮರೆತ್ಬಿಟ್ಟೆ. ಮನೆ ಸಾಮಾನೆಲ್ಲ ಎಲ್ಲಿಟ್ಟಿದೀರಿ?"
ಎಲ್ಲಿ ಎಂಬುದನ್ನು ಜಯದೇವ ತಿಳಿಸಿದ. ಅದಕ್ಕೆ ಅವರೆಂದರು:
"ಪರವಾಗಿಲ್ಲ. ಆದರೂ ಇಲ್ಲಿಗೇ ತರಿಸ್ಬಿಡೋದು ವಾಸಿ. ಸ್ಕೂಲು ಜವಾನನಿಗೆ
ಹೇಳಿ ಕಳಿಸ್ತೀನಿ."
ವೆಂಕಟರಾಯರಿಗೇನಾಯ್ತೆಂದು ತಿಳಿಯುವ ಕುತೂಹಲ ಜಯದೇವನಿಗೂ
ಇತ್ತು. ಹೊರಕ್ಕೆಳೆದು ತಂದ ಎರಡು ಕುರ್ಚಿಗಳ ಮೇಲೆ ಇಬ್ಬರೂ ಕುಳಿತ ಬಳಿಕ,
ನಂಜುಂಡಯ್ಯ ತಾವಾಗಿಯೇ ಆ ವಿಷಯ ಪ್ರಸ್ತಾಪಿಸಿದರು.