ಈ ಪುಟವನ್ನು ಪ್ರಕಟಿಸಲಾಗಿದೆ

322

ಸೇತುವೆ

ಜಯದೇವನ ನಿರ್ದೇಶದಂತೆ ಹುಡುಗ, ಎರಡೆರಡು ಇಡ್ಲಿ ಚಟ್ಣಿ ಬೆಣ್ಣೆ ತಂದ.
"ಹೋಟ್ಲಲ್ಲಿ ಯಾವಾಗಲೂ ಇಡ್ಲೀನೇ ಮೇಲು. ಎಣ್ಣೆ ಅವಾಂತರ ಇರೋ
ದಿಲ್ಲ" ಎಂದ ಜಯದೇವ. ಅದು, ಸ್ವಾನುಭವದಿಂದ ಆತ ಸಿದ್ಧಗೊಳಿಸಿದ್ದ ಸೂತ್ರ.
ಅಷ್ಟರಲ್ಲೆ ಹೊರಗೆ ಗರ್ ಗರ್ ಎಂದು ರೇಡಿಯೋ ಸದ್ದಾಯಿತು_ನೀರು ಬರು
ವುದಕ್ಕೆ ಮುಂಚೆ ಕೊಳಾಯಿ ಸಂಕಟದ ಸ್ವರ ಹೊರಡಿಸುವಂತೆ.
'ಸಾಯಂಕಾಲ ಏಳುಕಾಲು ಗಂಟೆಯಿಂದ ಏಳೂವರೆ ವರೆಗೆ'_
"ಕಾರ್ಯಕ್ರಮ ವಿವರಣೆ ಆಗ್ತಾ ಇದೆ," ಎಂದಳು ಸುನಂದಾ, ಉತ್ಸಾಹದ
ಧ್ವನಿಯಲ್ಲಿ.
ಜಯದೇವನ ಹುಬ್ಬುಗಳು ಚಲಿಸಿದುವು. ಬೇರೆಯೊಂದು ಕಾರಣಕ್ಕಾಗಿ ಆತ
ನಿಗೆ ಸೋಜಿಗವಾಗಿತ್ತು.
"ಹೋದ ಸಾರೆ ಬಂದಾಗ ಈ ಹೋಟ್ಲಲ್ಲಿ ರೇಡಿಯೋ ಇರಲಿಲ್ಲ ಕಣೇ."
ಹುಡುಗ ಕಾಫಿ ತಂದಿರಿಸಿದ. ದೊಡ್ಡ ಗ್ಲಾಸುಗಳ ತುಂಬಾ ದ್ರಾವಕವಿತ್ತು.
ಆದರೆ ಬಣ್ಣ ಏನೇನೂ ಆಕರ್ಷಕವಾಗಿರಲಿಲ್ಲ.
"ಕಲಗಚ್ಚು ನೀರಿನ ಹಾಗಿದೆ. ಇಂಥ ಕಾಫಿ ಕೊಟ್ಟು ದುಡ್ಡು ಮಾಡ್ದೋರು
ರೇಡಿಯೋ ಇಡೋದಕ್ಕೇನು?" ಎಂದಳು ಸುನಂದಾ,ಕಟುವಾದ ಧ್ವನಿಯಲ್ಲಿ.
"ಬೆಂಗಾಡಿನಲ್ಲಿ ಅರವಟ್ಟಿಗೆ ಇದ್ದ ಹಾಗೆ ಈ ಹೋಟ್ಲು. ಆತ ಇಷ್ಟು
ಕೊಡೋದೇ ದೊಡ್ದು. ಇದೂ ಇಲ್ದಿದ್ರೆ__"
"ನಿಮ್ಮ ಆ ಊರಲ್ಲೂ ಇಂಥದೇ ಅರವಟ್ಟಿಗೆ ತಾನೆ ಇರೋದು? ಒಂದು ವರ್ಷ
ವೆಲ್ಲ ಆ ಅಮೃತ ಕುಡಿದೂ ಕುಡಿದೂ ಕಾಹಿಲೆ ಮಲಗಿದ್ದಿರಿ!"
ಜಯದೇವ ನಕ್ಕ. ಆದರೆ ಮುಂದೆ ಮಾತುಕತೆಗೆ ಅವಕಾಶವಿಲ್ಲದ ಹಾಗೆ,
ಮೋಟಾರು ಬಂದ ಸದ್ದಾಯಿತು.
"ಬಸ್ ಬಂತು! ಬೇಗ್ನೆ ಕುಡಿ!"
ಒಳಕ್ಕೆ ಇಣಿಕಿ ಹುಡುಗನೆಂದ:
"ಇನ್ನೂ ಕಾಲು ಗಂಟೆ ಟೈಮಿದೆ ಸಾರ್. ಡ್ರೈವರೂ ಕಂಡಕ್ಟರೂ ಕಾಫಿಗೆ
ಇಲ್ಲಿಗೇ ಬರ್ತಾರೆ.
ಸಮಾಧಾನಪಡಿಸುವ ಆಶ್ವಾಸನೆ.ಆದರೂ ಕುಳಿತಿರಲು ಸ್ಥಳ ಸಿಗದೇ ಹೋಗುವು
ದೇನೋ:ಎಂಬ ಕಾತರ.
ಹುಡುಗ ಕೇಳಿದ:
"ಇನ್ನೇನು ಬೇಕು ಸಾರ್?"
"ಬಿಲ್ಲು."
"ಹೋಗಿ ಹೇಳ್ತೀನಿ;"
ಸುನಂದಾ ಮುಂದಾದಳು. ಆಕೆಯನ್ನು ಹಿಂಬಾಲಿಸಿ ಜಯದೇವ ಹೊರಟ.