ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

367

ನೋಡಿ, ಹೌದೊ ಅಲ್ಲವೊ ಎನ್ನುವಂತೆ ಸ್ವಲ್ಪ ತಲೆಬಾಗಿಸಿ, ಪ್ರತಿ ನಮಸ್ಕಾರ ಮಾಡು
ತ್ತಿದ್ದರು ನಂಜುಂಡಯ್ಯ. ಜಯದೇವನೂ ಕುತೂಹಲದಿಂದ ಅತ್ತಿತ್ತ ನೋಡುತ್ತಿದ್ದ.
ಜಯರಾಮಶೆಟ್ಟರ ಮನೆ ಆ ಹಾದಿಯಲ್ಲಿರಲಿಲ್ಲ. ಇಂದಿರೆಯರೂ ಇರಲಿಲ್ಲ. ಆದರೂ
ಪರಿಚಯದ ಹಳೆಯ ವಿದ್ಯಾರ್ಥಿಗಳು ಇಬ್ಬರು ಮೂವರು ಕಣ್ಣಿಗೆ ಬಿದ್ದರು. ಗುರುತು
ಹಿಡಿದ ಅವರ ಮುಖಗಳರಳಿದಾಗ ಜಯದೇವನಿಗೂ ಸಂತೋಷವಾಗುತ್ತಿತ್ತು.
ನಂಜುಂಡಯ್ಯನ ಜತೆ ಆತನೂ ಮರುವಂದನೆ ನೀಡುತ್ತಿದ್ದ-ಸ್ವಲ್ಪ ಕೈಯೆತ್ತಿ.
ಸುನಂದೆಗೆ ಮಾತ್ರ, ನೋಡುತ್ತಿದ್ದವರ ದೃಷ್ಟಿಗೆ ಬಲಿಯಾಗುವುದರ ಹೊರತು
ಬೇರೇನೂ ಇರಲಿಲ್ಲ.
ಅಂತೂ ಖಾಲಿಯಾಗಿದ್ದೊಂದು ಮನೆ ಕಾಣಲು ದೊರೆಯಿತು. ಅದಕ್ಕಿದ್ದುದು
ಊರು ಹೆಂಚಿನ ಛಾವಣಿ.
"ಸುತ್ತುಮುತ್ತು ಅನುಕೂಲವಾಗಿಲ್ಲ," ಎಂದಳು ಸುನಂದಾ.
"ಇನ್ನೂ ಎರಡಿವೆ, ನೋಡೋಣ," ಎಂದರು ನಂಜುಂಡಯ್ಯ.
ಆ ಮನೆಗಳನ್ನು ನೋಡಿ ಇಟ್ಟಿದ್ದ ವಿದ್ಯಾರ್ಥಿ, ಅವರಿಗೆಲ್ಲ ಪಥನಿರ್ದೇಶಕನಾದ.
ಆ ಮನೆಗಳೂ ಸುನಂದೆಗೆ ಒಪ್ಪಿಗೆಯಾಗದೆ ಇದ್ದರೆ, ಕರೆದು ತಂದ ತಮಗೆ
ಒಂದು ರೀತಿಯ ಅವಮಾನವಾಗುವುದೆಂದು, ನಂಜುಂಡಯ್ಯ ಹೊಸ ವಾದ ಆರಂಭಿ
ಸಿದರು:
"ಸದ್ಯಕ್ಕೆ ಅವೆರಡರಲ್ಲಿ ಒಂದನ್ನ ಆರಿಸಿ. ಯಾವುದಾದರೂ ಒಳ್ಳೇ ಮನೆ ಖಾಲಿ
ಆದಾಗ ಅದನ್ನು ಕೊಡಿಸೋ ಜವಾಬ್ದಾರಿ ನನಗಿರ್ಲಿ."
"ಹಾಗೇ ಮಾಡೋಣ," ಎಂದ ಜಯದೇವ.
ಸುನಂದೆಯತ್ತ ತಿರುಗಿ ನಂಜುಂಡಯ್ಯನೆಂದರು:
"ಇನ್ನೂ ಒಂದು ಹೇಳ್ತೀನಿ. ಬೆಂಗಳೂರಿನ ಮಟ್ಟದಿಂದ ಈ ಮನೆಗಳನ್ನು
ಅಳೀಬೇಡಿ."
"ಇಲ್ಲವಪ್ಪ," ಎಂದಳು ಸುನಂದಾ.
ಆ ಎರಡು ಮನೆಗಳಲ್ಲಿ ಒಂದು ತಕ್ಕ ಮಟ್ಟಿಗೆ ಅನುಕೂಲವಾಗಿತ್ತು. ದೀಪ,
ಹಿತ್ತಿಲಲ್ಲೆ ಬಾವಿ, ಮೇಲಕ್ಕೆ ಇದ್ದ ನೀರು, ಮನೆಯ ಮುಂದುಗಡೆ ಮುರುಕಲು ಬೇಲಿ
ಆವರಿಸಿದ್ದ ಒಂದಷ್ಟು ಜಾಗ. ಹೊದಿಸಿದ್ದುದು ಮಂಗಳೂರು ಹೆಂಚು. ಹೆಚ್ಚೆಂದರೆ
ಇಪ್ಪತ್ತು ವರ್ಷ ವಯಸ್ಸಾಗಿದ್ದ ಕಟ್ಟಡ. ಒಳಗೆ ಕೊಠಡಿ, ಹಜಾರ, ಅಡುಗೆ
ಮನೆ ,ಬಚ್ಚಲು ಮನೆಗಳಿದ್ದುವು. ಹಿಂಭಾಗದಲ್ಲಿತ್ತು ಕಕ್ಕಸು.
ನಂಜುಂಡಯ್ಯನೆಂದರು:
"ಈ ಮನೆಯ ಮಾಲಿಕರು ನಮ್ಮವರೇ. ಬಾಡಿಗೆ ಹದಿನ್ರೆದು ರೂಪಾಯೀಂತ
ಹೇಳ್ತಿದಾರೆ. ಹನ್ನೆರಡಕ್ಕೆ ಗೊತ್ಮಾಡ್ತೀನಿ. ಲೈಟಿಗೆ ನೀವೇನೂ ಕೊಡಬೇಕಾದ್ದಿಲ್ಲ.
ಶಾಲೆ ಇಲ್ಲಿಂದ ಎರಡೇ ಫರ್ಲಾಂಗು ದೂರ. ನಮ್ಮ ಮನೆಯೂ ಸಮೀಪವೇ.