ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

371

ಜಯದೇವ ಊಟ ಮಾಡಿ ಕಾಹಿಲೆ ಬಿದ್ದ ಆ ಆನಂದ ವಿಲಾಸವನ್ನು ನೋಡಲು
ಸುನಂದಾ ಕುತೂಹಲಿಯಾಗಿದ್ದಳು. ಆದರೆ ಹೋಟೆಲು ಮುಖ್ಯ ಬೀದಿಯಲ್ಲಿದ್ದುದ
ರಿಂದ ಆಕೆ ನಿರಾಶಳಾಗಬೇಕಾಯಿತು.
...ಅವರು ಮೂವರೂ ಮನೆ ಸೇರುವ ಹೊತ್ತಿಗೆ ದೀಪಗಳು ಹತ್ತಿ
ಕೊಂಡಿದ್ದುವು.
ರಾತ್ರೆ ಊಟವಾದ ಬಳಿಕ, ಜಯದೇವ ಎಷ್ಟು ಬೇಡವೆಂದರೂ ಕೇಳದೆ, ತಮ್ಮ
ಕೊಠಡಿಯಲ್ಲೆ ದಂಪತಿ ಮಲಗಲು ಏರ್ಪಾಟು ಮಾಡಿಕೊಟ್ಟರು ನಂಜುಂಡಯ್ಯ.
ತಾವು ಆ ರಾತ್ರೆಯ ಮಟ್ಟಿಗೆ ಒಳಹಜಾರವನ್ನು ಆಶ್ರಯಿಸಿದರು.
ಮಧ್ಯಾಹ್ನ ಒಮ್ಮೆ ಮುದ್ದಿಸಿ ಹೋಗಿದ್ದ ನಿದ್ದೆ ಎಷ್ಟು ಹೊತ್ತಾದರೂ ಬರಲಿಲ್ಲ.
ಕರಿಯ ಮೋಡಗಳು ಕತ್ತಲೆಯೊಡನೆ ಬೆರೆತುಕೊಂಡಿದ್ದುವು. ಆಕಾಶದಲ್ಲಿ ಅಲ್ಲೊಂದು
ಇಲ್ಲೊಂದರಂತೆ ಕಾಣುತ್ತಿದ್ದುವು ನಕ್ಷತ್ರಗಳು. ಹಗಲಿನ ಕಾವು ಆರುತ್ತ ಬಂತು. ಬಳಿಕ
ತಣ್ಣನೆಯ ಗಾಳಿಯೊಂದು ಬೀಸಿತು.
ಜಯದೇವ ಮೆಲ್ಲನೆ ಸುನಂದೆಯ ಮೈ ಮುಟ್ಟಿ ಕೇಳಿದ:
"ನಿದ್ದೆ ಬಂತೇನೆ?"
"ಇಲ್ಲ."
ಜಯದೇವ ಆಕೆಯ ಎದೆಗಡ್ಡವಾಗಿ ತೋಳು ಬಳಸಿದ. ಆಕೆ ಆತನ ಮೈಗೆ
ಒತ್ತಿಕೊಂಡಳು.
ನುಸುಳಿ ಬಂದಿದ್ದ ಗಾಳಿ ಮಾಯವಾಗಿ, ಕೊಠಡಿಯ ಕತ್ತಲು ಮತ್ತೆ ಬಿಸಿ
ಏರಿತು.
ಜಯದೇವನೆಂದ:
"ಮೂರು ವರ್ಷದ ಹಿಂದೆ ಇಲ್ಲಿಗೆ ಬಂದಿದ್ದ ದಿನ, ರಾತ್ರೆ ಹ್ಯಾಗಿತ್ತು ಅಂತೀಯಾ?
ಗುಡುಗು-ಮಿಂಚು-ಮಳೆ! ಅಬ್ಬಾ!"
ಸುನಂದಾ ಕೇಳಿದಳು:
“ಆಗ ಎಲ್ಲಿ ಮಲಗಿದ್ದಿರಿ?"
ಆತನೆಂದ:
“ರಂಗರಾಯರ ಮನೇಲಿ."
ಉತ್ತರ ಸಮರ್ಪಕವಾಗಲಿಲ್ಲವೆಂದು ಮತ್ತೂ ಒಂದು ಮಾತು ಸೇರಿಸಿದ:
"ಒಬ್ಬನೇ."