ಈ ಪುಟವನ್ನು ಪ್ರಕಟಿಸಲಾಗಿದೆ

376

ಸೇತುವೆ

"ಏನು?"
ಆಗಲೆ ಕ್ಷೀಣವಾಗಿತ್ತು ಆಕೆಯ ಸ್ವರ.
"ಗೃಹಪ್ರವೇಶದ ಅಡುಗೇಲಿ ಒಂದು ಕಡಮೆಯಾಗಿತ್ತು."
“ಯಾವುದು?"
“ಸಿಹಿ."
"ಮಹಾ. ನೀವು ಹೇಳಿದ್ರೆ ಮಾಡ್ತಿದ್ದೆ."
"ಇನ್ನೂ ತಡವಾಗಿಲ್ಲ ಬಿಡು. ಒಬ್ಬರಿಗೊಬ್ಬರು ಕೊಟ್ಟುಕೊಂಡರಾಯ್ತು."
ಮಾತಿನ ಜತೆಯಲ್ಲೆ ಕೃತಿ.
"ಥೂ ಬಿಡೀಂದ್ರೆ!"
ಕಂಬನಿಯಿಂದ ತೇವಗೊಂಡಿದ್ದ ಕಣ್ಣುಗಳಿಗೂ ಒಂದೊಂದು.
"ಇನ್ನೆಲ್ಲಾದರೂ ರಂಪ ಮಾಡೀಯೆ! ಹುಂ!"
"ಹೋಗ್ರಿ! ಗುಂಡ ಇದ್ದ ಹಾಗಿದೀರಾ ನೀವು."
ಆಕೆಯನ್ನು ಬಿಟ್ಟು ದೂರ ಸರಿದು ಜಯದೇವನೆಂದ:
"ಅಯ್ಯೋ ಪಾಪ! ಏನೂ ತಿಳೀದ ಎಳೇ ಮಗು ನೀನು."
ಅಷ್ಟರಲ್ಲೇ ಜವಾನ ಬಾಗಿಲ ಬಳಿ ನಿಂತು, ಕೆಮ್ಮಿ, ತನ್ನ ಆಗಮನವನ್ನು
ಸಾರಿದುದರಿಂದ, ಮಾತುಕತೆ ಅಲ್ಲಿಗೆ, ನಿಂತಿತು. ಸುನಂದಾ ಪಿಸು ದನಿಯಲ್ಲಿ ಅಂದಳು;
"ಎಷ್ಟು ಹೊತ್ತಾಯ್ತೋ ಏನೋ ಆತ ಬಂದು...."
"ಇರಲಿ ಬಿಡು.. ನಾವು ಹೊಸತಾಗಿ ಮದುವೆಯಾದೋರೂಂತ ಆತನಿಗೂ
ಗೊತ್ತಿದೆ."
ಶಾಲೆಯ ಜವಾನನ ಕೈಯಲ್ಲಿ ಬಿಟ್ಟಿ ದುಡಿಸಿಕೊಳ್ಳುವುದು ಜಯದೇವನಿಗೇನೂ
ಇಷ್ಟವಿರಲಿಲ್ಲ. ಹೊರಬಂದು ಆತ ಹೇಳಿದ:
"ಇವತ್ತು ಕೆಲಸ ಸ್ವಲ್ಪ ಜಾಸ್ತಿ ಇದೆ ಕಣಯ್ಯ. ಮಾಡೋದಕ್ಕಾಗುತ್ತಾ
నిನ್ಕೈಲಿ?"
“ಹೇಳಿ ಸೋಮಿ."
"ಮೊದಲು ಒಂದು ಪಾವು ಮೊಸರು ಮತ್ತು ಅಚ್ಛೇರು ಒಳ್ಳೇ ಹಾಲು
ತಗೊಂಡ್ಬಾ. ಇಷ್ಟು ಹೊತ್ನಲ್ಲಿ ಸಿಗುತ್ತಾ?"
"ಓ. ಗೌಳಿಗರ ಗಲ್ಲೀಲಿ ಸಿಕ್ಕಿಯೇ ಸಿಕ್ತೈತೆ."
"ಸರಿ ಹಾಗಾದ್ರೆ."
ಎರಡು ಪಾತ್ರೆಗಳೊಡನೆ ಆತ ಹೊರಟಾಗ ಸುನಂದಾ ಎಚ್ಚರಿಕೆಯ ಮಾತನ್ನಾಡಿ
ದಳು:
"ಪಾತ್ರೆ ಒಂದಕ್ಕೊಂದು ಮುಟ್ಟಿಸ್ಬೇಡ. ಹಾಲು ಕೆಟ್ಹೋಗುತ್ತೆ".
"ಆಗಲಿ ತಾಯಿ," ಎಂದ ಜವಾನ.